ಮಾಡಿದ ಕೆಲಸ ನೋಡಿ ಮತ ಕೊಡಿ: ಜಯಪ್ರಕಾಶ್‌ ಹೆಗ್ಡೆ

KannadaprabhaNewsNetwork | Published : Apr 18, 2024 2:22 AM

ಸಾರಾಂಶ

ಉಡುಪಿ ಸುತ್ತಮುತ್ತ ಮತ್ತು ಮಲ್ಪೆ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಜಯಪ್ರಕಾಶ್‌ ಹೆಗ್ಡೆ ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಜನಪ್ರತಿನಿಧಿಗಳಿಗೆ ಮತ ನೀಡುವಾಗ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ನೀಡಬೇಕು. ಕಳೆದ ನಾಲ್ಕು ದಶಕಗಳಿಂದ ಕರಾವಳಿಯ ಅಭಿವೃದ್ಧಿಗಾಗಿ ನನಗೆ ಸಿಕ್ಕಿದ ಅವಕಾಶ ಮತ್ತು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಜನ ಮೆಚ್ಚಿಕೊಂಡಿದ್ದಾರೆ. ನಾನು ಮಾಡಿರುವ ಕೆಲಸಗಳನ್ನು ನೋಡಿ, ಇನ್ನಷ್ಟು ಕೆಲಸ ಮಾಡುವುದಕ್ಕೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಮನವಿ ಮಾಡಿದ್ದಾರೆ.

ಅವರು ಉಡುಪಿ ಸುತ್ತಮುತ್ತ ಮತ್ತು ಮಲ್ಪೆ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಮತಯಾಚಿಸಿದರು.

ಉಡುಪಿ ಪ್ರಜ್ಞಾವಂತ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆಂಬುದು ಸ್ಪಷ್ಟವಾಗಿದೆ. ಗೆದ್ದ ಮೇಲೆ ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಜನಪ್ರತಿನಿಧಿಯ ಕರ್ತವ್ಯ. ಆದ್ದರಿಂದ ನಾನು ಗೆದ್ದರೆ ಜನರ ಕೆಲಸ ಮಾಡಲೇಬೇಕಾಗುತ್ತದೆ. ಕೆಲಸ ಮಾಡದಿದ್ದಾಗ ಪ್ರಶ್ನಿಸುವ ಹಕ್ಕು ಮತದಾರರಿಗಿದೆ ಎಂದ ಅವರು, ಗೆದ್ದು ಮತ್ತೆ ಆ ಕ್ಷೇತ್ರಕ್ಕೆ ಕಾಲಿಡದಿದ್ದರೆ ಜನರು ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಹೇಳಿಕೊಳ್ಳಲು ಅಭಿವೃದ್ಧಿಯ ಕೆಲಸಗಳು ಇಲ್ಲದಿದ್ದಾಗ ತಮ್ಮ ನಾಯಕರ ಹೆಸರಿನಲ್ಲಿ ಮತ ಕೇಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಎಂದವರು ಹೇಳಿದರು.

ಜನಸಾಮಾನ್ಯರ ಬದುಕಿಗೆ ಸ್ಪಂದಿಸುವುದು ಮತ್ತು ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿದುವುದು ಕಾಂಗ್ರೆಸ್‌ನ ಗುರಿಯಾಗಿದೆ ಎಂದು ಹೆಗ್ಡೆ ಹೇಳಿದರು.

ಪಕ್ಷದ ನಾಯಕ ಪ್ರಸಾದ್‌ ರಾಜ್ ಮಾತನಾಡಿ, ಜಯಪ್ರಕಾಶ್‌ ಹೆಗ್ಡೆ ಅವರಂಥ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಅವರನ್ನು ಕ್ಷೇತ್ರದ ಜನ ಗೆಲ್ಲಿಸಿ ಕೇಂದ್ರದಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಲು ಅವಕಾಶ ನೀಡಬೇಕಾಗಿದೆ. ಹೆಗ್ಡೆ ಅವರು ಒಬ್ಬ ನಿಷ್ಠಾವಂತ ರಾಜಕಾರಣಿ. ಸೋಲು-ಗೆಲುವನ್ನು ಲೆಕ್ಕಿಸದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದವರು. ಈ ಕಾರಣಕ್ಕಾಗಿ ಚಿಕ್ಕಮಗಳೂರು ಮತ್ತು ಉಡುಪಿ ಕ್ಷೇತ್ರದ ಜನ ಅವರ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ. ಮತದಾನ ಮಾಡುವಾಗ ಹೆಗ್ಡೆ ಅವರ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ. ಕರಾವಳಿಯ ಮೀನುಗಾರರ ಬದುಕಿಗೆ ಸದಾ ಸ್ಪಂದಿಸುವ ಹೆಗ್ಡೆ ನಮ್ಮ ಆಯ್ಕೆಯಾಗಲೇಬೇಕಾಗಿದೆ ಎಂದರು.

ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌, ಉಡುಪಿ ನಗರ ಸಭೆ ಸದಸ್ಯ ಗಣೇಶ್ ನೆರ್ಗಿ, ಪಕ್ಷದ ನಾಯಕರಾದ ಕೃಷ್ಣಮೂರ್ತಿ, ಎಂ.ಎ.ಗಫೂರ್ ಸೇರಿದಂತೆ ಪಕ್ಷದ ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Share this article