ಕೊಪ್ಪಳ: ನಗರದಲ್ಲಿ ಸೀಗೆ ಹುಣ್ಣಿಮೆ ಪ್ರಯುಕ್ತ ಗುರುವಾರ ಸಕ್ಕರೆ ಆರತಿ ಮಾರಾಟ ಜೋರಿತ್ತು.
ಶನಿವಾರ ಸೀಗೆ ಹುಣ್ಣೀಮೆ ಇರುವ ಕಾರಣ ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಬಂಡಿಯಲ್ಲಿ ಸಕ್ಕರೆ ಆರತಿ ಮಾರಾಟ ಜರುಗುತ್ತಿದೆ. ಅಚ್ಚುಗಳಿಂದ ತಯಾರಿಸಿದ ಆರತಿಗಳಿಗೆ ಬೇಡಿಕೆ ಹೆಚ್ಚು. ಸೀಗೆ ಹುಣ್ಣಿಮೆಗೆ ಹೆಣ್ಣುಮಕ್ಕಳು ಆರತಿ ಬೆಳಗುವುದರಿಂದ ಬರದ ನಡುವೆಯೂ ಆರತಿ ವ್ಯಾಪಾರ ಭರ್ಜರಿ ಆಗಿದೆ. ಕೆಜಿ ಆರತಿಗೆ ₹125 ಬೆಲೆ ಇದೆ. ಹೆಣ್ಣು ಮಕ್ಕಳ ಹಬ್ಬವೆಂದೇ ಸೀಗೆ ಹುಣ್ಣಿಮೆ ಪ್ರಸಿದ್ಧ. ಗಂಡನ ಮನೆಗೆ ತೆರಳಿದ ಹೆಣ್ಣು ಮಗಳಿಗೆ, ಹೆಣ್ಣುಮಕ್ಕಳಿಗೆ ಆರತಿ ಖರೀದಿಸಿ ಕೊಟ್ಟು ಬರುವ ಸಂಪ್ರದಾಯವಿದೆ.ಗ್ರಾಮೀಣ ಪ್ರದೇಶದಲ್ಲಿ ಗ್ರಾಮದ ದೇವಸ್ಥಾನದಲ್ಲಿ ಸೀಗೆ ಎಂಬ ದೇವತೆಯನ್ನು ಪ್ರತಿಷ್ಠಾಪಿಸಿ ಇಡೀ ಗ್ರಾಮದ ಮಹಿಳೆಯರು ಅಲ್ಲಿಗೆ ತೆರಳಿ ಆರತಿ ಬೆಳಗುತ್ತಾರೆ. ನಂತರ ತಮ್ಮ ಮನೆಯ ದ್ವಾರಬಾಗಿಲಿಗೆ, ದೇವರಿಗೆ ಆರತಿ ಬೆಳಗಿ ಸೀಗೆ ಹುಣ್ಣಿಮೆ ಆಚರಿಸುತ್ತಾರೆ. ಕೆಲವೆಡೆ ಜಮೀನುಗಳಿಗೆ ತೆರಳಿ ಪೂಜೆ ಸಹ ಸಲ್ಲಿಸುತ್ತಾರೆ.
ಶನಿವಾರ ಇರುವ ಸೀಗೆ ಹುಣ್ಣಿಮೆಗೆ ಈಗಾಗಲೇ ಆರತಿ ಖರೀದಿ ಜೋರಿದ್ದು, ವ್ಯಾಪಾರಸ್ಥರು ಸಹ ಈ ಸಲ ಬೆಲೆ ಏರಿಕೆಯಿಂದ ಆರತಿ ಮಾಡಲು ಸಾಮಗ್ರಿ ಖರೀದಿಗೆ ದುಬಾರಿ ವೆಚ್ಚ ತಗುಲಿದೆ. ಈ ಮಧ್ಯೆ ₹125ಕ್ಕೆ ಕೆಜಿ ಆರತಿ ಮಾರಾಟ ಮಾಡಿದರೆ ಹೆಚ್ಚು ಲಾಭದ ನಿರೀಕ್ಷೆ ಇಲ್ಲ ಎನ್ನುತ್ತಾರೆ ಅವರು.