ಕನ್ನಡಪ್ರಭ ವಾರ್ತೆ ಸಾಗರ ಜಗತ್ತನ್ನು ಜಯಿಸುವುದು ಮುಖ್ಯವಲ್ಲ. ತನ್ನನ್ನು ತಾನು ಮೊದಲು ಜಯಿಸಿ, ಮನಸ್ಸನ್ನು ಗೆಲ್ಲಬೇಕು. ಪರೋಪಕಾರಕ್ಕಾಗಿ ತನ್ನನ್ನು ತಾನು ತ್ಯಾಗ ಮಾಡುವುದು ಶ್ರೇಷ್ಠವಾದುದು ಎಂದು ಆನಂದಪುರ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.
ಜೀವಜಗತ್ತಿಗೆ ಸದಾ ಉಸಿರಾಗಿರುವ ಪ್ರಕೃತಿಯನ್ನು ದೇವರನ್ನಾಗಿ ಆರಾಧಿಸಬೇಕು. ಒಳ್ಳೆಯ ಮನಸ್ಸು ಇದ್ದರೆ ಮಾತ್ರ ಒಳ್ಳೆಯ ಕೆಲಸ ಮಾಡಲು ಸಾಧ್ಯ. ಪ್ರತಿಯೊಬ್ಬರಲ್ಲೂ ಒಳ್ಳೆಯದನ್ನು ಬಯಸುವ ಮನೋಧರ್ಮ ಬೆಳೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಪುಣ್ಯಸಾಗರ ಮುನಿಗಳು ಆಶೀರ್ವಚನ ನೀಡಿ, ಬದುಕಿನಲ್ಲಿ ನಿರಂತರವಾಗಿ ಧರ್ಮ ಕಾರ್ಯಗಳನ್ನು ಮಾಡಬೇಕು. ದ್ವೇಷ, ಅಸೂಯೆ ಸೇರಿದಂತೆ ಅರಿಷಡ್ವರ್ಗಗಳನ್ನು ನಾಶ ಮಾಡಿದರೆ ಮಾತ್ರ ಮೋಕ್ಷದೆಡೆಗೆ ಸೇರಲು ಸಾಧ್ಯ. ಅಹಿಂಸೆಯನ್ನು ಉಸಿರಾಗಿಸಿಕೊಂಡು ಸಾರ್ಥಕ ಜೀವನ ನಡೆಸಬೇಕು. ಗಳಿಸುವುದೇ ಬದುಕು ಆಗಬಾರದು. ಪುಣ್ಯ ಮತ್ತು ಧರ್ಮಕಾರ್ಯಕ್ಕಾಗಿ ಒಂದಷ್ಟು ಸಮಯ ಮೀಸಲು ಇಡಬೇಕು. ಜೈನಧರ್ಮವು ಜಗತ್ತಿಗೆ ಅಹಿಂಸಾ ಸಂದೇಶ ನೀಡಿದೆ ಎಂದರು.ಆರತಿಪುರ ಜೈನ ಮಠದ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮಿಗಳು ಮಾತನಾಡಿದರು. ವಡನಬೈಲ್ ಕ್ಷೇತ್ರದ ಧರ್ಮದರ್ಶಿ ಎಚ್.ಎಂ.ವೀರರಾಜಯ್ಯ ಜೈನ್ ಅಧ್ಯಕ್ಷತೆ ವಹಿಸಿದ್ದರು. ಸೋಂದಾ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಸವಿತಾ ದೇವರಾಜ್, ಎಸ್.ಆರ್,ನಾಗರಾಜ್, ಪದ್ಮನಾಭಯ್ಯ ಹಾರಿಗೆ, ಪ್ರೇಮಕುಮಾರ್ ಕಾರ್ಗಲ್, ಸುರೇಂದ್ರ ಮಹಾಲೆ, ಕೆ.ಟಿ.ನೇಮಯ್ಯ, ರಾಜು ಪಂಡಿತ್ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಬಿತಾ ಸ್ವಾಗತಿಸಿ, ಕುಮುದಾ ನಾಗಭೂಷಣ್ ನಿರೂಪಿಸಿದರು. ದೇವರಾಜ್ ವಂದಿಸಿದರು.- - - -ಫೋಟೋ:
ವಡನ್‌ಬೈಲ್‌ನಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು.