ಬಂಜಾರ ಸಮುದಾಯದಿಂದ ಸೀತ್ಲಾ ಹಬ್ಬ ಆಚರಣೆ

KannadaprabhaNewsNetwork | Published : Jul 11, 2024 1:36 AM

ಸಾರಾಂಶ

ಹಬ್ಬದ ಪ್ರಯುಕ್ತ ಗ್ರಾಮಗಳಲ್ಲಿ ಯುವಕರು ಚೀನಿ-ದಾಂಡು ಆಟ ಸೇರಿದಂತೆ ಇತರೆ ಗ್ರಾಮೀಣ ಆಟ ಆಡುತ್ತಾರೆ.

ಲಕ್ಷ್ಮೇಶ್ವರ: ತಮ್ಮದೇ ವಿಶಿಷ್ಟ ಸಂಸ್ಕೃತಿ ಸಂಪ್ರದಾಯ ಹಾಗೂ ಧರ್ಮ ಪಾಲನೆಯ ಮೂಲಕ ವಿಶೇಷವಾಗಿ ಗುರುತಿಸಿಕೊಳ್ಳುವ ಬಂಜಾರ ಸಮುದಾಯದವು ಕರ್ನಾಟಕ ಅಷ್ಟೇ ಅಲ್ಲದೆ ದೇಶಾದ್ಯಂತ ಸೀತ್ಲಾ ಹಬ್ಬವನ್ನು ವಿಶೇಷತೆ ಹಾಗು ವಿಜೃಂಭಣೆಯಿಂದ ಆಚರಿಸಿದರು.

ಆಷಾಢ ಮಾಸದಲ್ಲಿ ಪ್ರಾರಂಭವಾಗಿ ಮಣ್ಣೆತ್ತಿನ ಅಮವಾಸ್ಯೆಯ ಬಳಿಕ ಮೊದಲನೆಯ ಮಂಗಳವಾರದಂದು ಆಚರಿಸುವ ಈ ಹಬ್ಬವನ್ನು ಉತ್ತಮ ಮಳೆ-ಬೆಳೆಗಾಗಿ, ಗ್ರಾಮದ ಜನ ಸಮುದಾಯ ಮಕ್ಕಳು ಮರಿ ಸೇರಿದಂತೆ ದನಕರುಗಳಿಗೆ ಯಾವುದೇ ರೋಗ ರುಜಿನಗಳು ಬಾರದಿರಲೆಂದು ಹಾಗು ಪರಿಸರ ಪ್ರಕೃತಿ ಜೀವಸಂಕುಲದ ರಕ್ಷಣೆಯಾಗಲೆಂದು ಸೀತ್ಲಾ ಮಾತೆಗೆ ಅಂದರೆ ಸಪ್ತ ಸಹೋದರಿ ಮಾತೆಯರಿಗೆ ಪೂಜೆ ಸಲ್ಲಿಸಿ ಬೇಡಿಕೊಳ್ಳಲಾಗುತ್ತದೆ.

ಈ ಹಬ್ಬದ ಪ್ರಯುಕ್ತ ಗ್ರಾಮಗಳಲ್ಲಿ ಯುವಕರು ಚೀನಿ-ದಾಂಡು ಆಟ ಸೇರಿದಂತೆ ಇತರೆ ಗ್ರಾಮೀಣ ಆಟ ಆಡುತ್ತಾರೆ. ವಿಶೇಷವಾಗಿ ಮಹಿಳೆಯರು ಬಂಜಾರ ಸಮುದಾಯದ ಜಾನಪದ ಹಾಡನ್ನು ಹಾಡುತ್ತಾ ನೃತ್ಯ ಮಾಡುತ್ತಾರೆ. ಸಂಜೆಯ ವೇಳೆಯಲ್ಲಿ ತಾಂಡಾದ ಹೆಣ್ಣುಮಕ್ಕಳು ಪ್ರತಿ ಮನೆಯಿಂದ ಒಂದು ತಂಬಿಗೆ ನೀರು ಹಾಗೂ ದವಸ ಧಾನ್ಯಗಳಿಂದ ಮಾಡಿದ ಸಿಹಿ ಅಡುಗೆಯ ನೈವೇದ್ಯ ಹಾಗೂ ಹಣ್ಣು ಕಾಯಿ ಪೂಜಾ ಸಾಮಾನು ತಗೆದುಕೊಂಡು ಎಲ್ಲರೂ ಜೊತೆಗೂಡಿ ಧಾರ್ಮಿಕ ದೈವೀಕತೆಯ ಇತಿಹಾಸ ಸಾರುವ ಜಾನಪದ ಹಾಡುಗಳನ್ನು ಹಾಡುತ್ತಾ ತಾಂಡಾದ ಮುಂದಿನ ಬಯಲು ಪ್ರದೇಶದಲಿರುವ ಸಪ್ತ (ಸಾತಿ ಭವಾನಿ) ಮಾತೆಯರ ಕಟ್ಟಾ (ಧಾರ್ಮಿಕ ಕ್ಷೇತ್ರ) ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಸೀತ್ಲಾ ಮಾತೆಯಲ್ಲಿ ಹರಿಕೆಗಾಗಿ ಬೇಡಿಕೊಂಡ ಭಕ್ತರು ಕೋಳಿ,ಹುಂಜಗಳ ನಡುವೆ ಕಾದಾಟ ಸ್ಪರ್ಧೆ ಏರ್ಪಡಿಸುತ್ತಾರೆ.

ಈ ಮಾತೆಯರ ಸೇವಕ ಲೂಕಡ್ ಬಳಿ ಹುಂಜ ಮತ್ತು ಕೋಳಿಯನ್ನೂ ಬಲಿಕೊಟ್ಟು ಹರಿಕೆ ತೀರಿಸುತ್ತಾರೆ. ಹೀಗೆ ಗ್ರಾಮದ ಯುವಕರು, ಹಿರಿಯರು, ಮಹಿಳೆಯರಿಂದ ಕೂಡಿದ ಭಕ್ತ ಸಮುದಾಯವು ಜೊತೆಗೂಡಿ ಮಹಾಭೋಗ ವಿಶೇಷ ಪೂಜೆಯೊಂದಿಗೆ ದೇವಿಯರಲ್ಲಿ ಪ್ರಾರ್ಥನೆ ಸಲ್ಲಿಸಿ ಬೇಡಿಕೊಳ್ಳುವದೊಂದಿಗೆ ಸೀತ್ಲಾ ಹಬ್ಬ ಆಚರಿಸುತ್ತಾರೆ.

ಈ ವೇಳೆ ಗುರಪ್ಪ ನಾಯಕ್, ರಾಮಣ್ಣ ಕಾರಬಾರಿ, ಸೋಮಪ್ಪ ಲಮಾಣಿ, ಪರಸಪ್ಪ ಲಮಾಣಿ, ಲಕ್ಕಪ್ಪ ಲಮಾಣಿ, ತುಳಜವ್ವ ಲಮಾಣಿ ಸೇರಿದಂತೆ ಯುವಕರು, ಮಕ್ಕಳು ಹಾಗೂ ಯುವತಿಯರು ಇದ್ದರು.

Share this article