ರೋಣ: ಪುರಸಭೆ ವ್ಯಾಪ್ತಿಗೆ ಒಳಪಡುವ ವಾಣಿಜ್ಯ ಮಳಿಗೆಗಳ ಬಾಡಿಗೆ ಹಣ ಕಳೆದ ಹಲವು ವರ್ಷಗಳಿಂದ ಅಂಗಡಿಕಾರರು ಪಾವತಿಸಿಲ್ಲ, ಅಂತಹ ಅಂಗಡಿಕಾರರಿಗೆ ಕೂಡಲೇ ಬಾಡಿಗೆ ಬಾಕಿ ಹಣ ಪಾವತಿಸುವಂತೆ ನೋಟಿಸ್ ನೀಡಿ, ಸ್ಪಂದಿಸದಿದ್ದಲ್ಲಿ ಅಂಗಡಿ ಪರವಾನಗಿ ರದ್ದುಗೊಳಿಸಿ ಸೀಜ್ ಮಾಡುವಂತೆ ಬುಧವಾರ ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಸರ್ವಾನುಮತದಿಂದ ಠರಾವು ಮಾಡಲಾಯಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ರಮೇಶ ಹೊಸಮನಿ, ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪಟ್ಟಣದ 1ನೇ ವಾರ್ಡ್‌ನ ಶುದ್ಧ ಕುಡಿವ ನೀರಿನ ಘಟಕ ಕೆಟ್ಟು ಹಲವು ದಿನ ಕಳೆದಿದ್ದು, ಅದನ್ನು ದುರಸ್ಥಿ ಮಾಡಿಲ್ಲ. ಅಲ್ಲಿನ ನಿವಾಸಿಗಳಿಗೆ ಕುಡಿವ ನೀರು ದೊರೆಯುತ್ತಿಲ್ಲ. ಅದನ್ನು ಸರಿಪಡಿಸದೇ ಹೊಸದಾಗಿ ಬಹಿರಂಗ ಲೀಲಾವ ಮಾಡುತ್ತಿದ್ದಿರಿ ಅದನ್ನು ಸರಿಪಡಿಸಿದ ನಂತರ ಶುದ್ಧ ಕುಡಿವ ನೀರಿನ ಘಟಕದ ಬಹಿರಂಗ ಲೀಲಾವ ಕರೆಯಿರಿ ಎಂದು ಸದಸ್ಯ ಮಲ್ಲಯ್ಯ ಮಹಾಪುರಷಮಠ ಆಕ್ರೋಶ ವ್ಯಕ್ತಪಡಿಸಿದರು.ವಾರ್ಡ್‌ಗಳಲ್ಲಿನ ಗಟಾರ ಸ್ವಚ್ಛತೆಗೆ ಸಿಬ್ಬಂದಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಸದಸ್ಯರ ಯಾವ ಮಾತಿಗೂ ಅಧಿಕಾರಿಗಳು ಬೆಲೆ ಕೊಡುವುದಿಲ್ಲ. ನಮ್ಮ ವಾರ್ಡ್‌ನಲ್ಲಿ ಚರಂಡಿ ಸ್ವಚ್ಛಗೊಳಿಸಲು ಹಲವು ಬಾರಿ ಅಧಿಕಾರಿಗಳಿಗೆ ಹೇಳಿದ್ದರೂ ಇದುವರೆಗೂ ಕ್ರಮಕೈಗೊಂಡಿಲ್ಲ. ಜನರು ಉತಾರ ಪಡೆಯಲು ಬಂದರೆ ಅಧಿಕಾರಿಗಳು ಅವರ ಬಳಿ ₹ 500 ಲಂಚ ಪಡೆದುಕೊಂಡು ಉತಾರ ಕೊಡುತ್ತಿದ್ದಾರೆ. ಲಾಭ ಸಿಕ್ಕರೇ ಮಾತ್ರ ಕೆಲಸ ಮಾಡುತ್ತಾರೆ. ಇಂತವರಿಗೆ ಹೇಳುವವರು ಕೇಳುವವರು ಯಾರು ಇಲ್ಲವೇ? ಎಂದು ಸದಸ್ಯ ವಿಜಯ ಗಡಗಿ ಅಧಿಕಾರಿಗಳ ನಡೆ ಖಂಡಿಸಿದರು.
ಪುರಸಭೆಯಲ್ಲಿ 25 ಕ್ಕೂ ಹೆಚ್ಚುವರಿ ಪೌರ ಕಾರ್ಮಿಕರು ಹಾಗೂ ವಾಹನ ಚಾಲಕರ ಅವಶ್ಯಕತೆ ಇದೆ. ಠರಾವು ಪಾಸ್ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸೋಣ ಎಂದು ಸದಸ್ಯ ಸಂಗಪ್ಪ ಜಿಡ್ಡಿಬಾಗಿಲು ಪ್ರಸ್ತಾಪಿಸಿದರು. ಇದಕ್ಕೆ ಸರ್ವ ಸದಸ್ಯರು ಒಮ್ಮತ ಸೂಚಿಸಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರಗಪ್ಪ ಹಿರೇಮನಿ, ಸದಸ್ಯರಾದ ಮಿಥುನ.ಜಿ. ಪಾಟೀಲ, ಬಾವಾಸಾಬ್ ಬೇಟಗೇರಿ, ದಾವಲಸಾಬ್ ಬಾಡಿನ, ವಿದ್ಯಾ ದೊಡ್ಡಮನಿ, ವಿಜಯಲಕ್ಷ್ಮಿ ಕೊಟಗಿ, ರೇಣುಕಾ ರಂಗನಗೌಡ್ರ, ಶಕುಂತಲಾ ದೇಶಣ್ಣವರ, ಅಂದಪ್ಪ ಗಡಗಿ, ಬಸಮ್ಮಕೊಪ್ಪದ, ಚನ್ನಬಾಮ್ಮ ಹಿರೇಮಠ, ಪುರಸಭೆ ಮತ್ತಿತರರು ಉಪಸ್ಥಿತರಿದ್ದರು.