ಕನ್ನಡಪ್ರಭ ವಾರ್ತೆ ಮಾಲೂರು
ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆಗೆ ಸಂಬಂಧಿಸಿದ ೩೮೦ಕ್ಕೂ ಹೆಚ್ಚು ನಿವೇಶನಗಳು ಅಕ್ರಮವಾಗಿ ಪರಭಾರೆಯಾಗಿರುವುದನ್ನು ಪತ್ತೆ ಹಚ್ಚಲಾಗಿದ್ದು, ಎಲ್ಲವನ್ನೂ ಯಾವುದೇ ಒತ್ತಡಕ್ಕೆ ಮಣಿಯದೆ ವಶಕ್ಕೆ ಪಡೆಯುವುದಾಗಿ ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ಇಲ್ಲಿನ ಪುರಸಭೆಯಲ್ಲಿ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳ ಕುರಿತು ಪುರಪಿತೃಗಳು ಹಾಗೂ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಒಂದು ಆಡಳಿತ ಸಂಸ್ಥೆ ಅಭಿವೃದ್ಧಿಯಾಗಬೇಕಾದರೆ ಸರ್ಕಾರದ ಅನುದಾನಗಳಿಗೆ ಕಾಯದೆ ಸ್ಥಳೀಯ ಸಂಪನ್ಮೂಲವನ್ನು ಹೆಚ್ಚಿಸಿಕೊಳ್ಳುವ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದರು.ಪುರಸಭೆಗೆ ವರಮಾನ ಬರುತ್ತಿಲ್ಲ
ಆದರೆ ಇಲ್ಲಿ ಹಿಂದಿನಿಂದಲೂ ಪುರಸಭೆ ಅಸ್ತಿಗಳು ಅಕ್ರಮವಾಗಿ ಪರಬಾರೆಯಾಗುವ ಜತೆಯಲ್ಲಿ ಪುರಸಭೆ ಮಳಿಗೆಗಳು ಅತಿ ಕಡಿಮೆ ಬಾಡಿಗೆಗೆ ನೀಡಲಾಗಿದೆ. ಇದರಿಂದ ಒಂದು ಕೋಟಿ ರು.ಗಳಿಗೂ ಹೆಚ್ಚು ಮಾಸಿಕ ವರಮಾನ ನೋಡಬೇಕಾದ ಇಲ್ಲಿನ ಪುರಸಭೆ ಹಲವು ಲಕ್ಷ ರು.ಗಳ ಸಂಗ್ರಹ ಮಾಡಲು ಒದಾಡುತ್ತಿದೆ. ಈ ನಿಟ್ಟಿನಲ್ಲಿ ಪುರಸಭೆ ವರಮಾನ ಹೆಚ್ಚಿಸುವ ಉದ್ದೇಶದಿಂದ ಹಲವು ವರ್ಷಗಳಿಂದ ಮರುಹಾರಜು ಆಗದ ಮಳಿಗೆಗಳನ್ನು ಮರುಹರಾಜು ಮಾಡಲಾಗುವುದು ಎಂದ ಶಾಸಕರು ಹೇಳಿದರು.ಸಿಎ ನಿವೇಶನಗಳ ಹರಾಜು
ಅಕ್ರಮವಾಗಿ ಪರಬಾರೆಯಾಗಿರುವ ಪುರಸಭೆ ಆಸ್ತಿಯನ್ನು ಪತ್ತೆ ಹಚ್ಚಲಾಗಿದ್ದು, ಮುಂದಿನ ಸಭೆಯೊಳಗೆ ಪಟ್ಟಣದಲ್ಲಿರುವ ಪುರಸಭೆ ಆಸ್ತಿಯಾಗಿರುವ ನಿವೇಶನಗಳ ಪಟ್ಟಿ ಹಾಗೂ ಅವರ ಹೆಸರುಗಳನ್ನು ಪ್ರಕಟಿಸಲಾಗುವುದು. ಮರುವಶ ಪಡಿಸಿಕೊಂಡು ಪುರಸಭೆಯ ಸಿಎ ಸೈಟ್ ಗಳನ್ನು ಹರಾಜು ಹಾಕಿ ಪುರಸಭೆಯ ಅಥಿಕ ಸ್ಥಿತಿಯನ್ನು ಉತ್ತಮಗೊಳಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಶೀಘ್ರವಾಗಿ ಸಿ.ಎ.ಸೈಟ್ ಹರಾಜಿಗೆ ಸರ್ಕಾರದ ಒಪ್ಪಿಗೆ ಸಿಗಲಿದೆ ಎಂದರು. ಆಶ್ರಯ ಯೋಜನೆಯಲ್ಲಿ ಇಪ್ಪತ್ತು ವರ್ಷದ ಹಿಂದೆ ಮುಂಗಡ ಕಟ್ಟಿದವರಿಗೆಲ್ಲರಿಗೂ ಬಡ್ಡಿ ಸಮೇತ ಸುಮಾರು ೫೩ ಕೋಟಿ ರು.ಗಳನ್ನು ಪಲಾನುಭವಿಗಳು ಖಾತೆಗೆ ವಾಪಸ್ ನೀಡಲಾಗಿದೆ. ೧೩೬೯ ರಲ್ಲಿ ಸದ್ಯರ‍್ಹರಾಗಿರುವ ೭೭೪ ಜನರಿಗೆ ನಿವೇಶನದ ಹಕ್ಕು ಪತ್ರ ವಿತರಿಸುವ ಜತೆಯಲ್ಲಿ ಮನೆಯನ್ನು ಸಹ ಕಟ್ಟಿಕೊಡಲಾಗುವುದು. ಆ ಬಗ್ಗೆ ವಸತಿ ಸಚಿವರೊಂದಿಗೆ ಮಾತನಾಡಿದ್ದು,ಒಪ್ಪಿಗೆ ಸಹ ಪಡೆಯಲಾಗಿದೆ ಎಂದರು.ಯರಗೋಳ್ ನೀರು ಸ್ಥಗಿತ
ಯರಗೋಳ್ ಜಲಾಶಯದಿಂದ ಪಾರೈಕೆಯಾಗುತ್ತಿರುವ ನೀರು ಮಣ್ಣು ಮಿಶ್ರಿತವಾಗಿರುವುದರಿಂದ ಅದನ್ನು ಸಂಸ್ಕರಿಸಿ ಪಟ್ಟಣಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ಸದ್ಯಕ್ಕೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ಶೀಘ್ರದಲ್ಲೇ ಮರು ಚಾಲನೆ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟಣದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಲು ಸಮ್ಮತಿಸಿದ್ದಾರೆ. ಅವರಿಗೆ ಈ ಅಧಿವೇಶನದೊಳಗೆ ವಾರ್ಡ್ ವಾರು ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ನೀಡಬೇಕಾಗಿದೆ. ಆದ್ದರಿಂದ ಪ್ರತಿ ವಾರ್ಡ್ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಅವಶ್ಯ ಇರುವ ಕಾಮಗಾರಿಗಳ ಪಟ್ಟಿ ನೀಡುವಂತೆ ಮನವಿ ಮಾಡಿದರು. ಮುಖ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪುರಪಿತೃಗಳು, ಪುರಸಭೆ ಸದಸ್ಯರು, ಮುಖ್ಯಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ನಮ್ಮ ಮನವಿ ಸ್ಪಂದಿಸದೆ ಅವಮಾನ ಮಾಡುತ್ತಿದ್ದಾರೆ. ನಾವು ಹೇಳುವ ಸಮಸ್ಯೆಗಳಿಗೆ ಯಾವುದೇ ರೀತಿಯಲ್ಲಿ ಪರಿಹಾರ ನೀಡುತ್ತಿಲ್ಲ. ನಮ್ಮ ಪೋನ್ ಕರೆ ಸ್ವೀಕರಿಸುವುದಿಲ್ಲ ಎಂದು ಅಪಾದಿಸಿದರಲ್ಲದೇ ಇದುವರೆಗೂ ಲಿಖಿತ ಮೂಲಕ ಪುರಸಭೆಗೆ ಸಂಬಂಧಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಇದುವರೆಗೂ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.ಪುರಸಭೆ ಸದಸ್ಯರ ಮಾತಿಗೆ ಸಹಮತ ವ್ಯಕ್ತ ಪಡಿಸಿದ ಶಾಸಕರು, ಇನ್ನೂ ಮುಂದೆ ಪುರಸದಸ್ಯರ ಪೋನ್ ಅಥವಾ ಅವರ ವಾರ್ಡ್ ಸಮಸ್ಯೆಗಳಿಗೆ ಸ್ಪಂದನೆ ನೀಡದಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ರಮೇಶ್, ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ.ರಮೇಶ್ ಬಾಬು, ಪ್ರಾಧಿಕಾರ ಅಧ್ಯಕ್ಷ ನಯೀಮ್, ಪುರಸಭೆ ಸದಸ್ಯರುಗಳು, ಅಧಿಕಾರಿಗಳು ಇದ್ದರು.