ಮಾರ್ಚ್‌ 17ರಿಂದ ಉದ್ಯೋಗಾರಿತ ತರಬೇತಿ ಶಿಬಿರಕ್ಕೆ ಆಯ್ಕೆ: ಸಂಸದೆ ಪ್ರಭಾ

KannadaprabhaNewsNetwork | Published : Mar 17, 2025 12:30 AM

ಸಾರಾಂಶ

ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಕ್ಯೂ-ಸ್ಪೈಡರ್ಸ್ ತರಬೇತಿ ಸಂಸ್ಥೆಯಿಂದ ‘ಕೌಶಲ್ಯ’-ಉಚಿತ ಉದ್ಯೋಗಾಧಾರಿತ ಬೃಹತ್ ತರಬೇತಿ ಶಿಬಿರಕ್ಕೆ ಮಾ.17ರಿಂದ 20ರವರೆಗೆ ನಗರದಲ್ಲಿ ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳಲ್ಲಿ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.

1200 ಪದವಿ ಮಕ್ಕಳಿಗೆ 2 ತಿಂಗಳ ತರಬೇತಿ । ನಾಲ್ಕು ದಿನ ಕಾರ್‍ಯಕ್ರಮ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೌಶಲ್ಯ ಕೊರತೆಯಿಂದಾಗಿ ಉದ್ಯೋಗಾವಕಾಶ ವಂಚಿತರಾಗುತ್ತಿರುವ ಉದ್ಯೋಗಾಂಕ್ಷಿ ಯುವ ಜನರಿಗೆ ಉಪಯುಕ್ತವಾಗುವಂತೆ ಎಸ್ಸೆಸ್ ಕೇರ್ ಟ್ರಸ್ಟ್‌, ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಕ್ಯೂ-ಸ್ಪೈಡರ್ಸ್ ತರಬೇತಿ ಸಂಸ್ಥೆಯಿಂದ ‘ಕೌಶಲ್ಯ’-ಉಚಿತ ಉದ್ಯೋಗಾಧಾರಿತ ಬೃಹತ್ ತರಬೇತಿ ಶಿಬಿರಕ್ಕೆ ಮಾ.17ರಿಂದ 20ರವರೆಗೆ ನಗರದಲ್ಲಿ ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳಲ್ಲಿ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೆ, ಎಸ್ಸೆಸ್ ಕೇರ್ ಟ್ರಸ್ಟ್ ಮುಖ್ಯಸ್ಥೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾ.17ರಿಂದ ನಾಲ್ಕು ದಿನ ವಿವಿಧ ಕಾಲೇಜುಗಳಲ್ಲಿ ಅಂತಿಮ ವರ್ಷದ ಪದವಿ ಓದುತ್ತಿರುವ 1200 ವಿದ್ಯಾರ್ಥಿಗಳಿಗೆ 2 ತಿಂಗಳ ಕಾಲ ಉಚಿತವಾಗಿ ಬಿಐಇಟಿ ಕಾಲೇಜು ಹಾಗೂ ಎಂಬಿಎ ಕಾಲೇಜುಗಳಲ್ಲಿ ಉದ್ಯೋಗಾದಾರಿತ ತರಬೇತಿ ನೀಡಲಾಗುವುದು ಎಂದರು.

ಮಾ.22ರ ಬೆಳಿಗ್ಗೆ 10.30ಕ್ಕೆ ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಶಿಬಿರ ಉದ್ಘಾಟನೆಗೊಳ್ಳಲಿದ್ದು, ಮಾ.26ರಿಂದ ಬಿಎಸ್‌ಸಿ, ಬಿಸಿಎ ವಿದ್ಯಾರ್ಥಿಗಳಿಗೆ ಬಿಐಇಟಿ ಕಾಲೇಜಿನಲ್ಲಿ ಹಾಗೂ ಬಿಎ, ಬಿಕಾಂ, ಬಿಬಿಎ ವಿದ್ಯಾರ್ಥಿಗಳಿಗೆ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಶಿಬಿರ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ತಮ್ಮ ಕಾಲೇಜು ಪ್ರಾಚಾರ್ಯರು, ಪ್ಲೇಸ್‌ಮೆಂಟ್ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

ದಾವಣಗೆರೆ ಜಿಲ್ಲಾ ಕೇಂದ್ರವೊಂದರಲ್ಲೇ 26 ಅನುದಾನಿತ, ಅನುದಾನ ರಹಿತ ಕಾಲೇಜಿವೆ. ಪ್ರತಿ ವರ್ಷ ಪದವಿ, ಸ್ನಾತಕೋತ್ತರ ಪದವಿ ಮುಗಿಸಿಕೊಂಡು, ಸುಮಾರು 10 ಸಾವಿರ ವಿದ್ಯಾರ್ಥಿಗಳು ಹೊರ ಬರುತ್ತಾರೆ. ಆದರೆ, ಅಂತಹವರಿಗೆ ಉದ್ಯೋಗಕ್ಕಾಗಿ ಕಂಪನಿಗಳು ನಡೆಸುವ ಸಂದರ್ಶನ, ವಿವಿಧ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ, ಉದ್ಯೋಗಾವಕಾಶ ವಂಚಿತರಾಗುತ್ತಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ, ಉದ್ಯೋಗಾದಾರಿತರಿಗೆ ಅಗತ್ಯವಿರುವುದು ಕೌಶಲ್ಯ ತರಬೇತಿ ಅಗತ್ಯವೆಂದು ಮನಗಂಡ ತಾವು, ಉದ್ಯೋಗಾದಾರಿತ ತರಬೇತಿ ಶಿಬಿರಕ್ಕೆ ಒತ್ತು ನೀಡಿದ್ದೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಉದ್ಯೋಗಾಧಾರಿತ ತರಬೇತಿ ನೀಡಲು ಸುಮಾರು 70-80 ಸಾವಿರಕ್ಕೂ ಅಧಿಕ ಖರ್ಚಾಗುತ್ತದೆ. ಆದರೆ, ನಮ್ಮ ದಾವಣಗೆರೆಯಲ್ಲೇ ಅತೀ ಹೆಚ್ಚು ಗ್ರಾಮೀಣ ಭಾಗದಿಂದ, ಬಡ ವಿದ್ಯಾರ್ಥಿಗಳು ಹೆಚ್ಚಾಗಿ ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ಅಂತಹವರಿಗೆ ಕನಿಷ್ಠ ಶುಲ್ಕ ಭರಿಸುವುದೂ ಕಷ್ಟ. ಹಾಗಾಗಿ ಅಂತಹವರಿಗೆ ಜೀವನ, ಭವಿಷ್ಟ ಕಟ್ಟಿಕೊಳ್ಳಲು ಅನುವಾಗುವಂತೆ ಕೌಶಲ್ಯ ತರಬೇತಿ ನೀಡಲು ಶಿಬಿರ ಹಮ್ಮಿಕೊಂಡಿದ್ದೇವೆ ಎಂದರು.

ಬೆಂಗಳೂರಿನ ಕ್ಯೂ-ಸ್ಪೈಡರ್ಸ್‌ ತರಬೇತಿ ಸಂಸ್ಥೆಯ ಸತೀಶ ಮಾತನಾಡಿ, ಕಳೆದ 17 ವರ್ಷದಿಂದ ತಾವು ಕಾರ್ಯ ನಿರ್ವಹಿಸುತ್ತಿದ್ದು, ಈವರೆಗೆ 2 ಲಕ್ಷಕ್ಕೂ ಅದಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ ಎಂದರು.

ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಕುಲ ಸಚಿವ ಶಶಿಧರ, ಸಿಂಡಿಕೇಟ್ ಸದಸ್ಯ ಪ್ರಶಾಂತ, ವಿರುಪಾಕ್ಷಿ, ಕಕ್ಕರಗೊಳ್ಳ ವೀರೇಶ ಪಟೇಲ್ ಇತರರು ಇದ್ದರು.

ವಿದ್ಯಾರ್ಥಿಗಳು ಅಂಕ ಗಳಿಸುವುವಷ್ಟೇ ಕೌಶಲ್ಯವೂ ಈಗ ಅತ್ಯಗತ್ಯವಾಗಿದೆ. ಕೌಶಲ್ಯದ ಕೊರತೆಯಿದ್ದರೆ ಉದ್ಯೋಗಪಡೆಯುವುದು ಕಷ್ಟ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನರ ಆಸಕ್ತಿಯಿಂದಾಗಿ ಮೊದಲ ಹಂತದಲ್ಲಿ ಉದ್ಯೋಗಾಧಾರಿತ ತರಬೇತಿ ನೀಡಲಾಗುತ್ತಿದೆ. ಇದು ಯಶಸ್ವಿಯಾದರೆ ಮುಂದೆ ಸರ್ಕಾರದ ಮಟ್ಟದಲ್ಲಿ ಕೌಶಲ್ಯ ತರಬೇತಿ ಪ್ರಾರಂಭಿಸುವ ಬಗ್ಗೆ ಆಲೋಚಿಸಲಾಗುವುದು.

ಪ್ರೊ.ಬಿ.ಡಿ.ಕುಂಬಾರ್, ಉಪ ಕುಲಪತಿ, ದಾವಿವಿ

Share this article