ಲಾಟರಿ ಮೂಲಕ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ

KannadaprabhaNewsNetwork | Published : Feb 18, 2024 1:36 AM

ಸಾರಾಂಶ

ಬಾಗಲಕೋಟೆ; ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆಗಾಗಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯ್ಕೆ ಪ್ರಕ್ರಿಯೆ ಜರುಗಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯ ಮಹಿಳಾ ಅಬಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆಗಾಗಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯ್ಕೆ ಪ್ರಕ್ರಿಯೆ ಜರುಗಿತು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿರುವ ದೇವದಾಸಿ ಪುನರ್ವಸತಿ ಯೋಜನೆಯಡಿ ಆದಾಯೋತ್ಪನ್ನ ಚಟುವಟಿಕೆ ಯೋಜನೆ, ಧನಶ್ರೀ ಯೋಜನೆ, ಉದ್ಯೋಗಿನಿ ಯೋಜನೆ, ಚೇತನ ಯೋಜನೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಬಂದ ಅರ್ಜಿಗಳನ್ನು ಇಡಲಾಗಿತ್ತು. ಪ್ರತಿ ಯೋಜನೆಗಳಿಗೆ ನೀಡಲಾದ ಗುರಿಗೆ ಅನುಗುಣವಾಗಿ ಲಾಟರಿ ಮೂಲಕ ಚೀಟಿ ಎತ್ತಿ ಫಲಾನುಭವಿಗಳ ಆಯ್ಕೆ ಮಾಡಲಾಯಿತು.

ದೇವದಾಸಿ ಪುನರ್ವಸತಿ ಯೋಜನೆಯಡಿ ಎಲ್ಲ ತಾಲೂಕು ಸೇರಿ ಒಟ್ಟು 54 ಗುರಿ ಪೈಕಿ 262 ಅರ್ಜಿಗಳು ಸ್ವೀಕೃತವಾಗಿದ್ದು, ಅದರಲ್ಲಿ 125 ತಿರಸ್ಕೃತಗೊಂಡಿದ್ದವು. ಧನಶ್ರೀ ಯೋಜನೆಯಡಿ 68 ಗುರಿ ಇದ್ದು, 296 ಅರ್ಜಿಗಳು ಸ್ವೀಕೃತವಾಗಿದ್ದವು. ಅದರಲ್ಲಿ 27 ಅರ್ಜಿ ತಿರಸ್ಕೃತಗೊಂಡಿದ್ದವು. ಉದ್ಯೋಗಿನಿ ಯೋಜನೆಯಡಿ ದಮನಿತ ಮಹಿಳೆ 4 ಗುರಿ ಪೈಕಿ 4 ಅರ್ಜಿ, ಎಚ್.ಐವಿ ಸೋಂಕಿತ ಮಹಿಳೆಯರಿಂದ 4 ಗುರಿ ಪೈಕಿ 5 ಅರ್ಜಿ ಬಂದಿದ್ದು, ಅದರಲ್ಲಿ 2 ಅರ್ಜಿ ತಿರಸ್ಕೃತಗೊಂಡಿವೆ. ಲಿಂಗತ್ವ ಅಲ್ಪಸಂಖ್ಯಾತರ 1 ಕ್ಕೆ 15 ಅರ್ಜಿ ಬಂದಿದ್ದು, ಅದರಲ್ಲಿ 9 ತಿರಸ್ಕೃತಗೊಂಡಿದ್ದವು.

ಚೇತನ ಯೋಜನೆಯಡಿ ಪರಿಶಿಷ್ಟ ಜಾತಿಗೆ 12 ಗುರಿ ಪೈಕಿ ಸ್ವೀಕೃತಗೊಂಡ 401 ಅರ್ಜಿ ಪೈಕಿ 388 ತಿರಸ್ಕೃತಗೊಂಡರೆ, ಪರಿಶಿಷ್ಟ ಪಂಗಡಕ್ಕೆ 7 ಗುರಿ ಪೈಕಿ ಬಂದ 46 ಅರ್ಜಿಗಳೂ ತಿರಸ್ಕೃತಗೊಂಡವು. ಇತರೆ 19 ಗುರಿ ಪೈಕಿ 298 ಅರ್ಜಿಗಳು ಸ್ವೀಕೃತೊಂಡಿದ್ದು, ಒಂದು ಮಾತ್ರ ಸರಿ ಇದ್ದು, ಉಳಿದವು ತಿರಸ್ಕೃತಗೊಂಡಿವೆ. ಒಟ್ಟಾರೆಯಾಗಿ ಈ ಯೋಜನೆಯಡಿ 38 ಗುರಿ ಪೈಕಿ 745 ಅರ್ಜಿಗಳು ಸ್ವೀಕೃತಗೊಂಡು ಅದರಲ್ಲಿ 14 ಸರಿ ಇದ್ದು, ಉಳಿದ 731 ಅರ್ಜಿ ತಿರಸ್ಕೃತಗೊಂಡಿವೆ. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ 36 ಗುರಿ ಪೈಕಿ ಸ್ವೀಕೃತಗೊಂಡ 44 ಅರ್ಜಿಗಳಲ್ಲಿ 25 ಸರಿ ಇದ್ದು, 19 ತಿರಸ್ಕೃತಗೊಂಡಿವೆ.

ವಿವಿಧ ಯೋಜನೆಗಳ ಆಯ್ಕೆ ಸಮಿತಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ ಎಚ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಮರಟ್ಟಿ, ಪೊಲೀಸ್, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಮಿಲನ ಸಂಘದ ಸಮೀರ್‌ ಕರ್ಜಗಿ, ಚೈತನ್ಯ ಮಹಿಳಾ ಸಂಘದ ಮಧು ನಡುವಿನಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article