ದೇವರಾಜು ಕಪ್ಪಸೋಗೆ ಕನ್ನಡಪ್ರಭ ವಾರ್ತೆ ಚಾಮರಾಜನಗರಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ಒಳಪಡುವ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಆಯ್ಕೆ ಕಗ್ಗಂಟಾಗೆ ಮುಂದುವರೆದಿದೆ.ಕಾಂಗ್ರೆಸ್ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲೂ ಚಾಮರಾಜನಗರದ ಲೋಕಸಭಾ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿಲ್ಲ. ಮುಖ್ಯಮಂತ್ರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದ್ದು ಅಳೆದು-ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಲೋಕ ಅಖಾಡಕ್ಕೆ ಇಳಿಸಬೇಕು ಎನ್ನುವುದು ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಅವರ ಒಲವಾಗಿದ್ದರೇ, ತನ್ನ ಬದಲು ಮಗ ಸುನೀಲ್ ಬೋಸ್ ಗೆ ಟಿಕೆಟ್ ಕೊಡುವಂತೆ ಎಚ್‌ಸಿಎಂ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ, ಕ್ಷೇತ್ರ ಇನ್ನೂ ಕಗ್ಗಂಟಾಗೇ ಉಳಿದಿದೆ.
ಮಹದೇವಪ್ಪಗೆ ಒತ್ತಡ ಏಕೆ?:ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಈ ಹಿಂದೆ ಜನತಾದಳದಲ್ಲಿ ಇದ್ದಾಗ ಒಮ್ಮೆ ಲೋಕಸಭೆಗೆ ಸ್ಪರ್ಧಿಸಿದ ಅನುಭವ ಹೊಂದಿದ್ದಾರೆ. ಅಲ್ಲದೆ, ಮೈಸೂರು ಮತ್ತು ಚಾಮರಾಜನಗರ ಎರಡು ಜಿಲ್ಲೆಯ ತಲಾ ನಾಲ್ಕು ಕ್ಷೇತ್ರ ಹೊಂದಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅವರು ಚಿರಪರಿಚಿತರು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವ ಕ್ಷೇತ್ರವನ್ನು ಗೆಲ್ಲಲು ಮಹದೇವಪ್ಪ ಅವರನ್ನು ಕಣಕ್ಕಿಳಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಮಹದೇವಪ್ಪ ಅವರು ಸ್ಪರ್ಧೆಗೆ ಒಪ್ಪುತ್ತಿಲ್ಲ. ಇದು ಸಿಎಂಗೆ ತಲೆನೋವಾಗಿ ಪರಿಣಮಿಸಿದೆ.