- ವಿಪ ನೈರುತ್ಯ ಪದವೀಧರರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ ಹೇಳಿಕೆ । ಹೊನ್ನಾಳಿಯಲ್ಲಿ ಕಾಂಗ್ರೆಸ್ ಸಭೆ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶುಕ್ರವಾರ ಪಟ್ಟಣದ ಗುರು ಭವನದಲ್ಲಿ ವಿಧಾನ ಪರಿಷತ್ತು ಚುನಾವಣೆಯ ಕಾಂಗ್ರೆಸ್ ಪಕ್ಷದ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ. ಕೆ.ಕೆ.ಮಂಜುನಾಥ್ ಕುಮಾರ್ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಅಯನೂರು ಮಂಜುನಾಥ್ ಪರ ಮತಯಾಚನೆಯ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ನೈರುತ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರ ಸುಮಾರು 30 ವಿಧಾನಸಭಾ ಕ್ಷೇತ್ರಗಳು, 5 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದೆ. ಸುಮಾರು 84.5 ಸಾವಿರ ಮತದಾರರಿದ್ದಾರೆ. ಅಭ್ಯರ್ಥಿಗಳು ಪ್ರತಿ ಮತದಾರರನ್ನೂ ಭೇಟಿಯಾಗಲು ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಒಂದು ಕಡೆ ಸೇರಿಸಿ ಸಭೆ ಮೂಲಕ ಮತಯಾಚನೆ ಮಾಡಲಾಗುತ್ತಿದೆ ಎಂದು ಹೇಳಿದರು.ತಮ್ಮ ರಾಜಕೀಯ ಜೀವಮಾನದಲ್ಲಿ ದುಡಿದು ತಿನ್ನುವ ಶ್ರಮಿಕ ವರ್ಗದವರ ಬಗ್ಗೆ ಗೌರವ ಇಟ್ಟುಕೊಂಡು ಅವರ ಹಿತರಕ್ಷಣೆಗಾಗಿ ಅನೇಕ ಹೋರಾಟಗಳನ್ನು ಮಾಡಿದ್ದೇನೆ. ಹೊರೆದು ಹೊಡೆದು ತಿನ್ನೋರನ್ನು ಸದಾ ವಿರೋಧಿಸತ್ತಲೇ ಬಂದಿದ್ದೇನೆ. ಒಂದು ಸಮಯದಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಬೆಂಗಳೂರಿನಲ್ಲಿ ಧರಣಿ ಮಾಡುತ್ತಿದ್ದ ಶಿಕ್ಷಕರನ್ನು ಕಂಡು ಅವರ ಸಮಸ್ಯೆಗಳನ್ನು ಆಲಿಸೋಣ ಬನ್ನಿ ಎಂದರೆ ಸ್ಥಳಕ್ಕೆ ಬಾರದ ಹಾಗೂ ಮೃತಪಟ್ಟ ಧರಣಿನಿರತರ ಬಗ್ಗೆ ಕಂಬನಿ ಮಿಡಿಯದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮನೆ ನಾಯಿ ತೀರಿಕೊಂಡಾಗ ಅದಕ್ಕೆ ತೀವ್ರವಾಗಿ ಕಂಬನಿ ಮಿಡಿದು ಗೋಳಾಡಿದ್ದರು. ನಾಯಿಗೆ ಕೊಟ್ಟ ಪ್ರೀತಿ ಹೋರಾಟಗಾರಿಗೆ ಇಲ್ಲದಂತೆ ಮಾಡಿದರು ಎಂದು ಟೀಕಿಸಿದರು.
ಈ ಬಾರಿಯ ನೈರುತ್ಯ ಕ್ಷೇತ್ರದ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥ್ಯಿಯಾಗಿರುವ ತನಗೆ ಮತ ನೀಡಬೇಕು. ನೀವು ನೀಡಿದ ಮತದ ಋಣ ತೀರಿಸುವ ಕೆಲಸನ್ನು ಮುಂದಿನ ದಿನಗಳಲ್ಲಿ ಪ್ರಮಾಣಿಕವಾಗಿ ಮಾಡುವುದಾಗಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಳಮಟ್ಟದ ಹೋರಾಟಗಳಿಂದಲೇ ಗುರುತಿಸಿಕೊಂಡು ವಿವಿಧ ಹಂತಗಳ ಅಧಿಕಾರವನ್ನು ನಿಭಾಯಿಸಿರುವ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾದ ಡಾ. ಕೆ.ಕೆ.ಮಂಜುನಾಥ ಕುಮಾರ್ ಅವರಿಗೆ ಹೆಚ್ಚಿನ ಮತಗಳ ಮೂಲಕ ಜಯಶೀಲರನ್ನಾಗಿಸಬೇಕು ಎಂದು ಹೇಳಿದರು.
ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಪುಷ್ಪ ರವೀಶ್, ಮಧುಗೌಡ, ಚೀಲೂರು ವಾಜೀದ್, ಸುಲೇಮಾನ್ ಖಾನ್, ವಾಗೀಶ್ ಸೇರಿದಂತೆ ಹಲವಾರು ಜನ ಮುಖಂಡರು, ಕಾರ್ಯಕರ್ತರು ಇದ್ದರು.
ಹೊನ್ನಾಳಿ ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಪರ ಮತಯಾಚನೆ ಸಲುವಾಗಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯನ್ನು ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ ಉದ್ಘಾಟಿಸಿದರು.