ಕನ್ನಡಪ್ರಭ ವಾರ್ತೆ ರಾಮಗನರ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿವೇಶನಗಳ ಹಂಚಿಕೆಗಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ನಗರ ಮತ್ತು ಗ್ರಾಮಗಳಲ್ಲಿ ವಾರ್ಡ್ ಸಮಿತಿ ರಚಿಸಲಾಗುವುದು. ನಾನೇ ಖುದ್ದಾಗಿ ಮುಂದೆ ನಿಂತು ವಾರ್ಡ್ ಸಮಿತಿ ಸಭೆಗಳ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 10 ಸಾವಿರ ನಿವೇಶನ ನೀಡಲು ಮುಖ್ಯಮಂತ್ರಿ ಚಿಂತಿಸಿ ಕಾರ್ಯಪ್ರವೃತ್ತರಾಗಿದ್ದು, ಅದಕ್ಕಾಗಿ ಸರ್ಕಾರಿ ಜಮೀನು ಗುರುತಿಸಲಾಗುತ್ತಿದೆ. ನಿವೇಶನ ರಹಿತರಿಗೆ ಹಾಗೂ ಬಡವರಿಗೆ ನಿವೇಶನ ಒದಗಿಸಲು ಈ ಜಿಲ್ಲೆಯಲ್ಲಿ 1300 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ರಾಮನಗರ ಕ್ಷೇತ್ರದಲ್ಲಿ 300 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದ್ದು, ಸುಮಾರು 27 ಕೋಟಿ ರುಪಾಯಿ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಸೇರಿ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಸುಸಜ್ಜಿತ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.ರಾಮನಗರ ಕಸಬಾ ಹಾಗೂ ಕೈಲಾಂಚಕ್ಕೆ ಕುಡಿಯುವ ನೀರು ಒದಗಿಸಲು ಮಂಚನಬೆಲೆಯಿಂದ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. 300 ಕೋಟಿ ರುಪಾಯಿ ವೆಚ್ಚದಲ್ಲಿ ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರತಿ ಮನೆಗೂ ಕುಡಿಯುವ ನೀರು ಪೂರೈಸಲಾಗುವುದು. ಇದನ್ನು ಮಾರ್ಚ್ 31ರೊಳಗೆ ಅನುಷ್ಠಾನಗೊಳಿಸಲಾಗುವುದು ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.ಸಮಸ್ಯೆ ಪರಿಹಾರ ವೇದಿಕೆ :
ಜನರ ಅಹವಾಲುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ಪಂದಿಸಲಾಗುತ್ತಿದೆ. ಇದು ಸಾಧಾರಣವಾದ ಕಾರ್ಯಕ್ರಮವಲ್ಲ. ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಎಲ್ಲಾ ವರ್ಗದ ಜನರ ದುಃಖ ದುಮ್ಮಾನಗಳನ್ನು ಸ್ಥಳದಲ್ಲಿಯೇ ಪರಿಹರಿಸಿ, ಅಹವಾಲುಗಳ ವಿಲೇವಾರಿ ಮಾಡಲಾಗುವುದು ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಇದೇ ಸಂದರ್ಭದಲ್ಲಿ ಹೊಲಿಗೆಯಂತ್ರ, ಟ್ಯಾಕ್ಸಿಗಳು, ಟಾರ್ಪಲ್‌ಗಳು, ಹಕ್ಕುಪತ್ರಗಳು ಸೇರಿ ವಿವಿಧ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಸೌಲಭ್ಯಗಳನ್ನು ವಿತರಿಸಿದರು.