ಅರಿವು ಕಾರ್ಯಕ್ರಮ । ವ್ಯಕ್ತಿತ್ವ ಬೆಳವಣಿಗೆ, ಜೀವನ ಕೌಶಲ್ಯ ಮಾಹಿತಿ
ಸ್ವಯಂ ಅರಿವಿನಿಂದ ಆಂತರಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಹಾಗೂ ಮನೋಬಲ ತರಬೇತುದಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರಿ ಹೇಳಿದರು.
ಸ್ವಯಂ ಅರಿವಿನಿಂದ ಆಂತರಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಹಾಗೂ ಮನೋಬಲ ತರಬೇತುದಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರಿ ಹೇಳಿದರು. ಗುಂಡ್ಲುಪೇಟೆಯಲ್ಲಿ ವ್ಯಕ್ತಿತ್ವ ಬೆಳವಣಿಗೆ ಮತ್ತು ಜೀವನ ಕೌಶಲ್ಯ ಕುರಿತ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿರುವ ಮುರಾರ್ಜಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಮತ್ತು ಮೊರಾರ್ಜಿ ವಸತಿ ಶಾಲೆ ಜಂಟಿಯಾಗಿ ಹಮ್ಮಿಕೊಂಡ ವ್ಯಕ್ತಿತ್ವ ಬೆಳವಣಿಗೆ ಮತ್ತು ಜೀವನ ಕೌಶಲ್ಯ ಕುರಿತ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಧ್ಯಯನದಿಂದ ಬದುಕಿನಲ್ಲಿ ಯಶಸ್ಸನ್ನು ಸಾಧಿಸಬಹುದು. ಅದಕ್ಕೆ ಬೇಕಾದ ಏಕಾಗ್ರತೆಯನ್ನು ಆಧ್ಯಾತ್ಮ ನೀಡುತ್ತದೆ. ಆಧ್ಯಾತ್ಮವು ಮೊಬೈಲ್ ಚಾರ್ಜ್ ಮಾಡಿದಂತೆ, ಚಾರ್ಜ್ ಕಾಣುವುದಿಲ್ಲ. ಆದರೆ, ಅದರಿಂದ ಎಲ್ಲವೂ ಸಾಧ್ಯವಾಗುತ್ತದೆ ಎಂದರು.
ಎಲ್ಲ ಧರ್ಮಗಳೂ ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತೇವೆ. ಅಂತಹಜ್ಯೋತಿಯು ನಮ್ಮ ಆತ್ಮದ ಜೊತೆ ಅನುಸಂಧಾನ ಹೊಂದಬೇಕು. ಇಂಥಹ ಆಂತರಿಕ ಶಕ್ತಿಯು ಧ್ಯಾನದಿಂದ ಬರುತ್ತದೆ. ವ್ಯಾಯಾಮದಿಂದ ದೈಹಿಕ ಶಕ್ತಿ ಹಾಗೂ ವ್ಯವಹಾರದಿಂದ ಆರ್ಥಿಕ ಶಕ್ತಿ ಸಂಪಾದಿಸಿದರೆ, ಸ್ವಯಂ ಅಧ್ಯಯನದಿಂದ ಅಧ್ಯಾತ್ಮ ಶಕ್ತಿ ಪಡೆಯಬಹುದು ಎಂದರು.
ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಮಹಾದೇವ ಪ್ರಸಾದ್ ಮಾತನಾಡಿ, ಮಕ್ಕಳು ವ್ಯಾಸಂಗದ ಜತೆಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳಿಗೂ ಗಮನ ನೀಡಬೇಕು. ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಸಮರ್ಥವಾಗಿ ಬಳಸಿಕೊಂಡು ಆತ್ಮವಿಶ್ವಾಸದಿಂದ ಭಾಗವಹಿಸಿ ಒಳ್ಳೆಯ ಹೆಸರು ಗಳಿಸಬೇಕು. ಇದರಿಂದ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಮನೆಗೆ ಹಳ್ಳಿಗೆ ಗೌರವ ತರುವ ಕಾರ್ಯ ಮಾಡಬೇಕು ಎಂದರು.