ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ಚೆನ್ನೀಪುರ ಗ್ರಾಮದಲ್ಲಿ ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಗ್ರಾಮ ವಿಕಾಸ ನಾಟಕೋತ್ಸವದಲ್ಲಿ ಮಾತನಾಡಿ, ಪೋಷಕರು ಸೇವಾ ಮನೋಭಾವ ರೂಢಿಸಿಕೊಂಡು ಆರೋಗ್ಯಕರ ವಾತಾವರಣ ನಿರ್ಮಿಸುವ ಜೊತೆಗೆ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಹಿಂದಿನ ಕಾಲದಲ್ಲಿ ನಾಟಕಗಳ ಮೂಲಕ ಜನರಿಗೆ ನ್ಯಾಯ, ನೀತಿ, ಧರ್ಮ ಬಗ್ಗೆ ತಿಳಿಸಿಕೊಡಲಾಗುತ್ತಿತ್ತು. ಆದರೆ, ಇಂದು ಚಲನಚಿತ್ರಗಳು, ಧಾರಾವಾಹಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಮಾಜಕ್ಕೆ ದುಷ್ಪರಿಣಾಮ ಬೀರುವ ಚಿತ್ರಗಳನ್ನು ತೋರಿಸುವ ಮೂಲಕ ಸಮಾಜ ಯಾವ ದಾರಿಯಲ್ಲಿ ಸಾಗುತ್ತಿದೆ ಎಂದು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದರು.ಹಳ್ಳಿಗಾಡಿನಲ್ಲಿ ಹೆಚ್ಚಿನ ಪೌರಾಣಿಕ ನಾಟಕಗಳು ನಡೆಯಬೇಕು. ಈ ನಾಟಕಗಳು ನಾಲ್ಕು ಮಕ್ಕಳ ಮನ ಪರಿವರ್ತನೆ ಮಾಡಿದರೆ ಪ್ರದರ್ಶನ ಮಾಡಿದ ಕಲಾವಿದರ ಶ್ರಮ ಸಾರ್ಥಕವಾಗುತ್ತದೆ ಎಂದರು.
ಪ್ರತಿಯೊಬ್ಬರು ಪ್ಲಾಸ್ಟಿಕ್ ಸಿಟಿ ನಾಟಕ ನೋಡಬೇಕು. ಪ್ಲಾಸ್ಟಿಕ್‌ನಿಂದ ಆಗುವ ಅನಾಹುತ ತಿಳಿದರೆ ಇದರಿಂದ ಮನಃ ಪರಿವರ್ತನೆ ಆಗಿ ಪ್ಲಾಸ್ಟಿಕ್ ಬಳಕೆಯಿಂದ ದೂರವಿರುವಂತೆ ಮಾಡಬಹುದು ಎಂದರು.
ಬಳ್ಳಾರಿ ಜೆಲ್ಲೆಯ ಸಿರಿಗೇರಿ ಧಾತ್ರಿ ರಂಗ ಸಂಸ್ಥೆಯ ಟಿ.ಎಂ.ವಿಜಯ್ ಕುಮಾರ್ ನೇತೃತ್ವದಲ್ಲಿ ಪ್ಲಾಸ್ಟಿಕ್ ಸಿಟಿ(ಪೊಪೆಟ್ ಶೋ) ಪ್ರದರ್ಶನ ನೀಡಿದರು. ಕರ್ನಾಟಕದ ಜಾನಪದ ಗೊಂಬೆ ಆಟ ರಂಗ ಪ್ರಕಾರಗಳಂತಹದ್ದೇ ಶೈಲಿಯ ಜಪಾನ್ ದೇಶದ ಬುನ್ರಾಕೋ ಪಪೆಟ್ ಆಟದ ಶೈಲಿಯಲ್ಲಿ ನಾಟಕ ಪ್ರಸ್ತುತ ಪಡಿಸಲಾಯಿತು. ಒಂದು ಗಂಟೆ ಕಾಲ ನಡೆದ ಜಾಗೃತಿ ನಾಟಕ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳ ಗಮನವನ್ನು ಕೇಂದ್ರಿಕರಿಸುವಲ್ಲಿ ಯಶಸ್ವಿಯಾಯಿತು.