ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸ್ವಾವಲಂಬಿಯಾಗಿ ಬದುಕಲು ಸ್ವಉದ್ಯೋಗ ಸಹಕಾರಿ, ಅಂತಹ ಉದ್ಯೋಗಾವಕಾಶ ಕಲ್ಪಿಸಿಕೊಡಲು ಚಿತ್ರದುರ್ಗದ ರುಡ್‌ಸೆಟ್ ಸಂಸ್ಥೆ ಸದಾ ಸಿದ್ಧವಿದೆ ಎಂದು ಚಿತ್ರದುರ್ಗ ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕ ಉದಯಕುಮಾರ್ ಹೇಳಿದರು.ಚಿತ್ರದುರ್ಗದ ಎಸ್.ಜೆ .ಎಂ. ವಿದ್ಯಾಪೀಠ, ಯುವ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ, ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಎಸ್.ಜೆ.ಎಂ ಪಾಲಿಟೆಕ್ನಿಕ್ (ಅನುದಾನಿತ) ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ತಾಲೂಕಿನ ಪಂಡರಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಎನ್ಎಸ್ಎಸ್ ಶಿಬಿರದ ಮೂರನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸ್ವ-ಉದ್ಯೋಗ ಕೈಗೊಳ್ಳುವ ವಿಷಯ ಕುರಿತು ಮಾತನಾಡಿದರು.
ನಿರುದ್ಯೋಗಿ ಯುವಕ ಯುವತಿಯರು 18 ರಿಂದ 45 ವರ್ಷದೊಳಗಿನ ಯಾರೇ ಆಗಿರಲಿ ಅವರಿಗೆ ನಮ್ಮಲ್ಲಿ ಲಭ್ಯವಿರುವ ಕೌಶಲ್ಯ ತರಬೇತಿ ನೀಡಲಾಗುವುದು . ಈ ಸಂಸ್ಥೆ ಇದುವರೆಗೆ ಜಿಲ್ಲೆಯಲ್ಲಿ ಮೂವತ್ತೈದು ಸಾವಿರ ಜನರಿಗೆ ತರಬೇತಿ ನೀಡಿದೆ. ತರಬೇತಿ ಪಡೆದ ಬಹುತೇಕರು ತಮ್ಮ ವೃತ್ತಿಯಲ್ಲಿ ನೈಪುಣ್ಯತೆಯೊಂದಿಗೆ ಕೆಲಸ ಆರಂಭಿಸಿ ಜೀವನದಲ್ಲಿ ಯಶಕಂಡಿದ್ದಾರೆ ಎಂದರು.ಸ್ವ ಉದ್ಯೋಗ ಮಾಡಲಿಚ್ಛಿಸುವವರು ಸಂಸ್ಥೆಗೆ ಬಂದು ಅರ್ಜಿ ಭರ್ತಿ ಮಾಡಿ ಹೋಗಬಹುದು. ಇಷ್ಟವಾದ ತರಬೇತಿ ಯಾವುದು ಎನ್ನುವುದನ್ನು ನಮೂದಿಸಿ ಹೋದಲ್ಲಿ ನಾವು ಆ ಸಂದರ್ಭಕ್ಕೆ ಕರೆಯುತ್ತೇವೆ. ತರಬೇತಿ ಸಂದರ್ಭದಲ್ಲಿ ಇಲ್ಲಿ ಎಲ್ಲವೂ ಉಚಿತವಾಗಿರುತ್ತದೆ .ಅದು ಪ್ರಯಾಣ ಭತ್ಯೆಯೂ ಸೇರಿದಂತೆ ಎಂದು ಸಂಸ್ಥೆಯ ಬಗೆಗಿನ ಅನೇಕ ಕೌಶಲ್ಯ ತರಬೇತಿಗಳ ಪರಿಚಯ ಮಾಡಿಕೊಟ್ಟರು.
ನಿವೃತ್ತ ಬ್ಯಾಂಕ್ ಅಧಿಕಾರಿ ತಿಪ್ಪೇಸ್ವಾಮಿ ಆರ್ಥಿಕ ಅರಿವು ವಿಷಯ ಕುರಿತು ಮಾತನಾಡಿ, ಹಿರಿಯರು ಹೇಳುವಂತೆ ಉಳಿತಾಯವೇ ಆಪದ್ಧನ ಎಂದು. ಪ್ರತಿಯೊಬ್ಬರು ಕಿರಿಯರು ಹಿರಿಯರು ಯಾರೇ ಇರಲಿ, ಯಾವುದೇ ಕ್ಷೇತ್ರದವರಿರಲಿ, ನಾವು ನಮ್ಮ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಜೀವನ ಸಾಗಿಸ ಬೇಕು. ಯಾವುದೇ ಕಾರಣಕ್ಕೂ ಅಪವ್ಯಯ ಮಾಡಬಾರದು. ಹಣ ಉಳಿತಾಯ ಮಾಡೋದು ಹೇಗೆ ಎಂಬ ಮಾಹಿತಿಯನ್ನು ಬ್ಯಾಂಕುಗಳಲ್ಲಿ ಅನೇಕ ಮಾರ್ಗ ಗಳಿವೆ. ಅಲ್ಲಿ ಸಲಹೆ ಪಡೆಯುವ ಮೂಲಕ ನೀವು ಅಲ್ಲಿ ಹಣ ಹೂಡಿಕೆ ಮಾಡಿದರೆ ತಕ್ಕ ಸಾಲವೂ ದೊರೆಯುತ್ತದೆ. ದೀರ್ಘಾವಧಿ ಉಳಿತಾಯ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವ ಅನೇಕ ಉಪಯುಕ್ತ ಮಾರ್ಗಗಳನ್ನು ಹೇಳಿದರು.ವೇದಿಕೆಯಲ್ಲಿ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ರಾಧಾ ಎಚ್.ಆರ್, ಪಂಡರಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಶಶಿರೇಖಾ ಮಂಜುನಾಥ್, ನಿವೃತ್ತ ಶಿಕ್ಷಕ ಜಿ.ಆರ್.ಹಾಲಪ್ಪ, ಎನ್ ಎಸ್ ಎಸ್ ಶಿಬಿರಾಧಿಕಾರಿ ಗೋವಿಂದರಾಜು. ಟಿ, ಶಿಬಿರದ ಮೇಲ್ವಿಚಾರಕ ಕೆ.ಸುರೇಶ್ ,ಸಹ ಮೇಲ್ವಿಚಾರಕ ಕೇಶವಮೂರ್ತಿ. ಎಂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮಧ್ಯೆ ಜಾನಪದ ಕಲಾವಿದ ಗಂಜಿಗೆಟ್ಟೆ ಆರ್.ಕೃಷ್ಣಮೂರ್ತಿ ಮತ್ತು ಮೀನಾಕ್ಷಿ ಅವರಿಂದ ಜಾನಪದ ಹಾಡುಗಾರಿಕೆ ಮತ್ತು ಹಾಸ್ಯ ಕಾರ್ಯಕ್ರಮ ನೆರವೇರಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆದವು.