ಸಾಗರ: ಸ್ವಯಂ ಉದ್ಯೋಗದಿಂದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎಂದು ಎಎಸ್ಐ ಮೀರಾಬಾಯಿ ಅಭಿಪ್ರಾಯಪಟ್ಟರು.
ನ್ಯಾಯವಾದಿ ಕೆ.ವಿ.ಪ್ರವೀಣ್ ಮಾತನಾಡಿ, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸದೃಢರಾದರೆ ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರಸ್ತುತ ಸ್ವಯಂ ಉದ್ಯೋಗಕ್ಕೆ ಬೇರೆಬೇರೆ ಹಂತದಲ್ಲಿ ಸಹಕಾರ ಸಿಗುತ್ತಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕಾದರೆ ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ತರಬೇತಿ ಪಡೆಯುವುದು ಅಗತ್ಯ ಎಂದರು.
ಮದರ್ ಥೆರೆಸಾ ಕೌಶಲ್ಯ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥೆ ಮರಿಯಾ ಲೀಮಾ ಮಾತನಾಡಿ, ಸಂಸ್ಥೆಯ ವತಿಯಿಂದ ಬೇರೆಬೇರೆ ವಲಯಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಮಹಿಳೆಯರಿಗೆ ಸ್ವಯಂ ಉದ್ಯೋಗ ನಡೆಸುವ ಕುರಿತು ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ಈ ಬಾರಿ ಬ್ಯೂಟಿಷಿಯನ್ ತರಬೇತಿ ಶಿಬಿರಕ್ಕೆ ೨೦ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು ಕಲಿತುಕೊಂಡಿದ್ದಾರೆ. ಬ್ಯಾಂಕಿನಿಂದ ೧೦ರಿಂದ ೧೫ ಲಕ್ಷ ರು.ವರೆಗೂ ಸಾಲಸೌಲಭ್ಯ ಸಿಗುತ್ತದೆ. ಇದರ ಜೊತೆ ಟೈಲರಿಂಗ್ ಸೇರಿ ಬೇರೆಬೇರೆ ವಿಭಾಗದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.ಶಿಥಲ್, ಲತಾ, ರೇಣುಕಾ ಇನ್ನಿತರರು ಹಾಜರಿದ್ದರು. ಪವಿತ್ರ ಎಸ್.ಡಿ. ಸ್ವಾಗತಿಸಿ, ಪ್ರಿಯಾಂಕ ನಿರೂಪಿಸಿದರು.