ಚಾತುರ್ಮಾಸ್ಯದ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ
ದೇಹದಲ್ಲಿ ಸಪ್ತ ಧಾತುಗಳಿದ್ದು, ಈ ಧಾತುಗಳು ಒಂದಕ್ಕೊಂದು ಸಾಮ್ಯವಾಗಿದ್ದಾಗ ಆರೋಗ್ಯ. ಧಾತುಗಳಲ್ಲಿ ವೈಷಮ್ಯ ಉಂಟಾದಾಗ ಅದೇ ಅನಾರೋಗ್ಯ ಎಂಬುದಾಗಿ ಆರೋಗ್ಯ ಶಾಸ್ತ್ರ ಹೇಳಿದ್ದು, ಆಯುರ್ವೇದದ ಮುಖ್ಯ ಲಕ್ಷ್ಯವೇ ಧಾತುಗಳ ಸಾಮ್ಯವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಬುಧವಾರ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಆರೋಗ್ಯವೆಂದರೆ ಕೇವಲ ರೋಗವಿಲ್ಲದ ಸ್ಥಿತಿಯಲ್ಲ. ದೇಹ, ಮನಸ್ಸು ಹಾಗೂ ಆತ್ಮದ ನಡುವೆ ಸಮತೋಲನ ಸಾಧಿಸಿದ ಸ್ಥಿತಿ ಎಂದು ಆಯುರ್ವೇದ ತಿಳಿಸುತ್ತದೆ. ವಾತ, ಪಿತ್ತ ಮತ್ತು ಕಫ ಎಂಬ ತ್ರಿದೋಷಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇವುಗಳ ಅಸಮತೋಲನವೇ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ವಿವರಿಸಿದರು.ಪೂರ್ಣ ಆರೋಗ್ಯ ಉಂಟಾದಾಗ ಮಾತ್ರ ಪೂರ್ಣ ಆತ್ಮದರ್ಶನ ಹೊಂದಲು ಸಾಧ್ಯ. ಧಾತು ಸಾಮ್ಯ ಏರ್ಪಟ್ಟಾಗ ಆತ್ಮದರ್ಶನವನ್ನು ಪಡೆಯಲು ಶಕ್ಯವಾಗುತ್ತದೆ. ಮಹಾನಾರಾಯಣೋಪನಿಷತ್ತು ಹಾಗೂ ಕಠೋಪನಿಷತ್ತುಗಳಲ್ಲಿ ಧಾತು ಸಾಮ್ಯವಾದಾಗ ಹೃದಯ ಗುಹೆಯಲ್ಲಿ ಹುದುಗಿ ಕುಳಿತಿರುವ ಆತ್ಮವನ್ನು ಕಾಣಬಹುದು ಎಂದು ಹೇಳಲಾಗಿದೆ ಎಂದು ಆಯುರ್ವೇದ ಹಾಗೂ ಉಪನಿಷತ್ತುಗಳ ಸಮೀಕರಣದೊಂದಿಗೆ ಆರೋಗ್ಯದಿಂದ ಆತ್ಮದರ್ಶನ ಸಾಧ್ಯ ಎಂದು ನಿರೂಪಿಸಿದರು.
ಬ್ರಹ್ಮಚರ್ಯ ಎಂಬುದಕ್ಕೆ ಧರ್ಮಶಾಸ್ತ್ರ, ಯೋಗಶಾಸ್ತ್ರ ಹಾಗೂ ಆಯೂರ್ವೇದ ಸ್ವಲ್ಪ ವಿಭಿನ್ನವಾದ ವ್ಯಾಖ್ಯಾನವನ್ನು ಮಾಡುತ್ತವೆ. ಸಂಕ್ಷೇಪವಾಗಿ ಹೇಳುವುದಾದರೆ ಆಯುರ್ವೇದದ ಪ್ರಕಾರ ಇಂದ್ರಿಯ ಸಂಯಮವೇ ಬ್ರಹ್ಮಚರ್ಯವಾಗಿದೆ. ಆಯುರ್ವೇದದ ಅಂತಿಮ ಉದ್ದೇಶ ಕೇವಲ ರೋಗ ನಿವಾರಣೆಯಲ್ಲ, ಆತ್ಮಜ್ಞಾನವನ್ನು ಸಾಧಿಸುವುದೇ ಅದರ ಪರಮ ಗುರಿಯಾಗಿದೆ. ಧಾತುಗಳ ಪ್ರಸನ್ನತೆ ಮತ್ತು ಮನಸ್ಸಿನ ಶುದ್ಧತೆಯ ಮೂಲಕ ಆತ್ಮಸಾಕ್ಷಾತ್ಕಾರ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.