ಕನ್ನಡಪ್ರಭ ವಾರ್ತೆ, ತುಮಕೂರುಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಯುವಜನರು ಪ್ರಮುಖ ಪಾತ್ರ ವಹಿಸುತ್ತಾರೆ. ಯುವಜನತೆ ಕ್ರಿಯಾತ್ಮಕ ಶಕ್ತಿಯಾಗಿ ಪುರುಷ ಸಿಂಹರಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಪಿ.ಕೃಷ್ಣಭಟ್ ಅಭಿಪ್ರಾಯಪಟ್ಟರು. ಅವರು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ 33 ನೇ ವಾರ್ಷಿಕೋತ್ಸವದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಯುವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಇಂತಹ ಶಕ್ತಿಯುತವಾದ ಯುವಜನಾಂಗವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಸಮಾಜ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದೆ. ಮುಂದಿಟ್ಟ ಹೆಜ್ಜೆ ಹಿಂದಿಡದೆ ಮುನ್ನುಗುವ ಕೆಚ್ಚೆದೆಯ ಯುವಜನತೆಯಿಂದ ಮಾತ್ರ ಶಕ್ತಿಯುತವಾದ ರಾಷ್ಟ್ರ, ಆತ್ಮನಿರ್ಭರ ಭಾರತ ನಿರ್ಮಾಣ ಸಾಧ್ಯ, ಎಂದರು.ಸ್ವಾಮಿ ವಿವೇಕಾನಂದರು ಹೇಳುವಂತೆ ಶಿಕ್ಷಣ ಎನ್ನುವುದು ಮನುಷ್ಯನಲ್ಲಿ ಈಗಾಗಲೇ ಇರುವಂತಹ ಪರಿಪೂರ್ಣತೆಯ ವ್ಯಕ್ತತೆ. ಚಾರಿತ್ರ್ಯ ನಿರ್ಮಾಣ ಮಾಡುವಂತಹ, ಮಾನಸಿಕ ಶಕ್ತಿಯನ್ನು ಪುಷ್ಠಿಗೊಳಿಸುವಂತಹ, ಬುದ್ಧಿಯನ್ನು ವೃದ್ಧಿಗೊಳಿಸುವಂತಹ, ಸ್ವಾವಲಂಬಿಗಳನ್ನಾಗಿಸುವಂತಹ ಶಿಕ್ಷಣ ಬೇಕಿದೆ. ದೃಢತೆ, ಸಮಗ್ರತೆ, ಅಚಲ ನಂಬಿಕೆ, ಆತ್ಮವಿಶ್ವಾಸ, ಪ್ರಾಮಾಣಿಕತೆಯಿಂದ ಮಾತ್ರ ಆತ್ಮನಿರ್ಭರ ಭಾರತ ನಿರ್ಮಾಣ ಸಾಧ್ಯ. ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿ ವಹಿಸಿಕೊಂಡು ಸಾಮಾಜಿಕ ಹಾಗೂ ರಾಷ್ಟ್ರೀಯ ಬೆಳವಣಿಗೆಯ ಕಾರ್ಯದಲ್ಲಿ ಸ್ವಪ್ರೇರಣೆಯಿಂದ ಭಾಗವಹಿಸುವಂತಹ ಯುವಜನತೆಯ ಅವಶ್ಯಕತೆಇದೆ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣೇಗೌಡರು ಮಾತನಾಡಿ ಸಮರ್ಥ ವ್ಯಕ್ತಿಗಳಿಂದ ಶ್ರೇಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಮಾನವ ಜನಾಂಗದ ಇತಿಹಾಸ ಆತ್ಮವಿಶ್ವಾಸ ಹೊಂದಿದ ಕೆಲವೇ ವ್ಯಕ್ತಿಗಳ ಇತಿಹಾಸ. ಆದ್ದರಿಂದ ವ್ಯಕ್ತಿತ್ವ ನಿರ್ಮಾಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದರು.
ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದಜೀ, ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜೀ, ಚಿತ್ರದುರ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಬ್ರಹ್ಮನಿಷ್ಠಾನಂದಜೀ, ಹರಿಹರರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಆತ್ಮ ದೀಪಾನಂದಜೀ, ತುಮಕೂರು ಆಶ್ರಮದ ಸ್ವಾಮಿ ಧೀರಾನಂದಜೀ ಹಾಗೂ ಸ್ವಾಮಿ ಪರಮಾನಂದಜೀರವರು ವೇದಘೋಷ ಹಾಗೂ ಭಗವನ್ನಾಮ ಸಂಕೀರ್ತನೆಯನ್ನು ನೆರವೇರಿಸಿಕೊಟ್ಟರು. ಸ್ವಾಮಿ ವೀರೇಶಾನಂದಜೀರವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪ್ರೊ.ಅನಸೂಯರವರು ನಿರೂಪಿಸಿ, ಚಿ. ಗಗನ್ ಅಬ್ಬಿನಹೊಳೆರವರು ವಂದಿಸಿದರು.