ಸಹಕಾರಿ ಸಂಘಗಳಿಂದ ಸ್ವಾವಲಂಬಿ ಜೀವನ

KannadaprabhaNewsNetwork | Published : Dec 11, 2024 12:46 AM

ಸಾರಾಂಶ

ದೇಶದ ಆರ್ಥಿಕ ವ್ಯವಸ್ಥೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಸಹಕಾರಿ ಆಂದೋಲನ ಕೋಟ್ಯಂತರ ಜನರ ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ

ರೋಣ: ಸಹಕಾರ ವಲಯವು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ರೈತರು ಹಾಗೂ ಹೈನುಗಾರರ ಬದುಕಿನ ಆಸರೆಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಸ್ವಾವಲಂಬಿ ಜೀವನಕ್ಕೆ ಸಹಕಾರಿ ಸಂಘವು ಶ್ರಮಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ. ನಿರ್ದೇಶಕ ಬಾಪುಗೌಡ ಡಿ. ಪಾಟೀಲ ಹೇಳಿದರು.

ಅವರು ಪಟ್ಟಣದ ಗುರು ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಹಾಗೂ ಧಾರವಾಡದ ಕೆಸಿಸಿ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ದೇಶದ ಆರ್ಥಿಕ ವ್ಯವಸ್ಥೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಸಹಕಾರಿ ಆಂದೋಲನ ಕೋಟ್ಯಂತರ ಜನರ ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ. ಗದಗ ಜಿಲ್ಲೆಯಲ್ಲಿ ನೇಕಾರರು, ಕೃಷಿ, ಹೈನುಗಾರಿಕೆ, ಮಾರಾಟ, ಕೃಷಿಯೇತರ, ಸಹಕಾರ ಬ್ಯಾಂಕ್‌ಗಳು ಸೇರಿದಂತೆ ವಿವಿಧ ವಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಾಮಾನ್ಯ ಸೇವಾ ಕೇಂದ್ರಗಳು ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿನ ನಾಗರಿಕರಿಗೆ ಬಿ2ಸಿ ಸೇವೆ, ಆರೋಗ್ಯ, ಹಣಕಾಸು, ಶಿಕ್ಷಣ ಮತ್ತು ಕೃಷಿ ಸೇವೆ ತಲುಪಿಸಲು ಶ್ರಮಿಸುತ್ತಿವೆ. ಇದು ದೇಶದ ಪ್ರಾದೇಶಿಕ, ಭೌಗೋಳಿಕ, ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಪೂರೈಸುವ ಪ್ಯಾನ್‌-ಇಂಡಿಯಾ ನೆಟ್‌ವರ್ಕ್‌ ಆಗಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಡಿಜಿಟಲ್ ಅಂತರ್ಗತ ಸಮಾಜದ ಸರ್ಕಾರದ ಆದೇಶ ಸಕ್ರಿಯಗೊಳಿಸುತ್ತದೆ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಸವರಾಜ ಅರಬಗೊಂಡರ ಮಾತನಾಡಿ, ಸಾಮಾನ್ಯವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎಂದು ಕರೆಯಲ್ಪಡುವ ಸಹಕಾರ ಕ್ರೆಡಿಟ್ ಸೊಸೈಟಿಯನ್ನು 10 ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಪ್ರಾರಂಭಿಸಬಹುದು. ಪಿಎಸಿಎಸ್ ಎಂಬುದು ಗ್ರಾಮೀಣ ಸಾಲಗಾರರೊಂದಿಗೆ ವ್ಯವಹರಿಸುವ, ಸಾಲ ನೀಡುವ ಮತ್ತು ಸಾಲಗಳ ಮರುಪಾವತಿ ಸಂಗ್ರಹಿಸುವ ಮೂಲ ಸಣ್ಣ ಘಟಕವಾಗಿದೆ. ಇದು ಒಂದು ಕಡೆ ಅಂತಿಮ ಸಾಲಗಾರರ ಮತ್ತು ಇನ್ನೊಂದು ಕಡೆ ಉನ್ನತ ಹಣಕಾಸು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವಕುಮಾರಗೌಡ ಎಸ್. ಪಾಟೀಲ ಮಾತನಾಡಿ, ಸಾಮಾನ್ಯ ಸೇವಾ ಕೇಂದ್ರಗಳನ್ನು ಪಿಎಸಿಎಸ್ ಮೂಲಕ ಗ್ರಾಮೀಣ ಜನರಿಗೆ ಲಭ್ಯವಾಗುವಂತೆ ಮಾಡುವುದು ಈ ಉಪಕ್ರಮದ ಉದ್ದೇಶವಾಗಿದೆ. ಈ ಉಪಕ್ರಮದೊಂದಿಗೆ ಪಿಎಸಿಎಸ್ ನಾಗರಿಕರಿಗೆ ಸಿಎಸ್‌ಸಿ ಯೋಜನೆಯ ಡಿಜಿಟಲ್ ಸೇವಾ ಪೋರ್ಟಲ್‌ನಲ್ಲಿ ಪಟ್ಟಿ ಮಾಡಲಾದ ಎಲ್ಲ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಿ.ಪಿ. ಪಾಟೀಲ ಮಾತಮಾಡಿ, ಇದು ಪಿಎಸಿಎಸ್‌ನ ವ್ಯಾಪಾರ ಚಟುವಟಿಕೆ ಹೆಚ್ಚಿಸುತ್ತಿದೆ ಮತ್ತು ಅವು ಸ್ವಾವಲಂಬಿ ಆರ್ಥಿಕ ಘಟಕಗಳಾಗಲು ಸಹಾಯ ಮಾಡುತ್ತದೆ. ಮೊದಲ ಹಂತದಲ್ಲಿ 6300 ಪಿಎಸಿಎಸ್‌ನ್ನು ಸಿಎಸ್‌ಸಿಗಳಾಗಿ ಕೆಲಸ ಮಾಡಲು ತರಬೇತಿ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ 30000 ಪಿಎಸಿಎಸ್‌ಗೆ ತರಬೇತಿ ನೀಡಲಾಗುತ್ತದೆ ಎಂದರು.

ಜಿ.ಕೆ. ರಾಮಪ್ಪ, ಪ್ರಶಾಂತ‌ ಮುಧೋಳ ವಿಶೇಷ ಉಪನ್ಯಾಸ ನೀಡಿದರು. ಕೆಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನೀತಾ ಸಿದ್ರಾಮ ಮಾತನಾಡಿದರು. ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ ನಿರ್ದೇಶಕ ಎಚ್.ಜಿ. ಹಿರೇಗೌಡ್ರ, ಗದಗ ಜಿಲ್ಲಾ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ, ಉಪಾಧ್ಯಕ್ಷ ವೈ.ಎಫ್. ಪಾಟೀಲ, ಧಾರವಾಡ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಎಂ. ಮರಿಗೌಡ್ರ, ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಅರವಿಂದ ಎನ್. ನಾಗಜ್ಜನವರ, ಸಹಕಾರ ಶಿಕ್ಷಣಾಧಿಕಾರಿ ಶರಣಬಸಪ್ಪ ಜಿ. ಕಾಟ್ರಳ್ಳಿ, ಎಂ.ಎಫ್. ಕಲಗುಡಿ, ಸಿ.ಕೆ. ಮಾಳಶೆಟ್ಟಿ, ಕೆಸಿಸಿ ಬ್ಯಾಂಕ್ ಜಿಲ್ಲಾ ನಿಯಂತ್ರಣಾಧಿಕಾರಿ ಎಸ್.ಜಿ. ಆಲದಕಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ವಂದಿಸಿದರು.

Share this article