ಬಿ. ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುಈ ಬಾರಿಯ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಸ್ವಾವಲಂಬಿ ನಾರಿಶಕ್ತಿ ಅನಾವರಣವಾಗಿತ್ತು. ಮಹಿಳಾ ಉದ್ದಿಮೆದಾರರು ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ 40 ಹೆಚ್ಚು ಮಳಿಗೆಗಳನ್ನು ನೀಡಲಾಗಿದ್ದು, ಈ ಮಳಿಗೆಗಳಲ್ಲಿ ವಿವಿಧ ವಸ್ತುಗಳ ವ್ಯಾಪಾರ ವಹಿವಾಟು ಜೋರಾಗಿತ್ತು.
ಹೌದು, ನಗರದ ಜೆ.ಕೆ. ಮೈದಾನದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯು ಆಯೋಜಿಸಿರುವ 4 ದಿನಗಳ ಮಹಿಳಾ ದಸರಾವನ್ನು ಮಂಗಳವಾರ ಆರಂಭವಾಯಿತು. ಈ ಮಹಿಳಾ ದಸರಾ ಭಾಗವಾಗಿ 40 ಹೆಚ್ಚು ಮಳಿಗೆಗಳಲ್ಲಿ ವ್ಯವಸ್ಥೆ ಮಾಡಲಾಗಿರುವ ವಸ್ತುಪ್ರದರ್ಶನ ಮತ್ತು ಮಾರಾಟವು ಗಮನ ಸೆಳೆಯಿತು.ಬಿದಿರು ಕರಕುಶಲ ಕೈಗಾರಿಕೆ, ಮಣ್ಣಿನ ಕರಕುಶಲ ವಸ್ತುಗಳು, ತೊಗಲು ಗೊಂಬೆಗಳು, ಮಕ್ಕಳ ಆಟಿಕೆಗಳು, ಬಟ್ಟೆ, ಸೀರೆ ಮಾರಾಟ, ಮಹಿಳಾ ಆಭರಣಗಳು, ಪೇಂಟಿಂಗ್ ಗಳು, ಚುರುಮುರಿ, ಪಾನಿಪುರಿ, ಕಜ್ಜಾಯ ಇನ್ನಿತರ ತಿಂಡಿ ತಿನಿಸುಗಳು, ಬ್ಯಾಂಗಲ್ ಸ್ಟೋರ್, ಮಶ್ರೂಮ್ ಫುಡ್ ಪ್ರಾಡಕ್ಟ್, ಚಾಕ್ಲೇಟ್, ಡ್ರೈಪ್ರೂಟ್, ಸಾಂಬರ್ ಪೌಡರ್, ನುಗ್ಗೆ ಸೊಪ್ಪಿನ ಪೌಡರ್, ಹ್ಯಾಂಡ್ ಮೇಡ್ ಜ್ಯುವೆಲರಿ, ಟೆರಾಕೋಟಾ, ಸಾವಯವ ಸೋಪ್, ಸಾಂಬಾರ್ ಪೌಡರ್, ಬ್ಯಾಗ್, ಸಿರಿಧ್ಯಾನ ಉತ್ಪನ್ನ, ಕೃತಕ ಆಭರಣ ಸೇರಿದಂತೆ ಸ್ತ್ರೀ ಸ್ವಾವಲಂಬನೆ ಸಾರುವ ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ಪ್ರಕೃತಿ ಗಿರಿಜನ ಒಕ್ಕೂಟ, ಚಾಮುಂಡೇಶ್ವರಿ ಸ್ತ್ರೀಶಕ್ತಿ ಸಂಘ, ಆರ್.ಎಲ್.ಎಚ್.ಪಿ ಧ್ವನಿ ಮಹಿಳಾ ಒಕ್ಕೂಟ, ವೈಭವ ಲಕ್ಷ್ಮಿ ಸ್ವಸಹಾಯ ಸಂಘ, ಧನಲಕ್ಷ್ಮಿ ಸ್ತ್ರೀ ಶಕ್ತಿ ಮಹಿಳಾ ಸಂಘ, ಮಕ್ಕಾ ಮಸೀದಿ ಸ್ತ್ರೀ ಶಕ್ತಿ ಸಂಘ, ಶ್ರೀ ಚಿಕ್ಕಮ್ಮ ಸ್ತ್ರೀ ಶಕ್ತಿ ಸಂಘ ಸೇರಿಂದಂತೆ 40 ಹೆಚ್ಚು ಮಳಿಗೆಗಳು ತಲೆ ಎತ್ತಿದ್ದವು.ಗೃಹಲಕ್ಷ್ಮಿ ಫಲಾನುಭವಿಗಳಿಂದ ವ್ಯಾಪಾರ:
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈಗ ಸ್ವಯಂ ವ್ಯಾಪಾರಿ ಆಗಿದ್ದಾರೆ. ಮಳಿಗೆಗಳನ್ನು ತೆರೆಯುವ ಮೂಲಕ ಭರ್ಜರಿ ವ್ಯಾಪಾರ ನಡೆಸುತ್ತಿದ್ದಾರೆ. ಪ್ರತಿ ತಿಂಗಳು ಗೃಹಲಕ್ಷ್ಮಿಯಿಂದ ಬಂದ ಹಣವನ್ನು ಕೂಡಿಟ್ಟು ಬಂಡವಾಳ ಮಾಡಿಕೊಂಡ ಮಹಿಳೆಯರು, ಮಹಿಳಾ ದಸರಾದಲ್ಲಿ ಬಗೆಯ ಬಗೆಯ ತಿಂಡಿ ತಿನಿಸುಗಳ ಮಳಿಗೆಯೊಂದಿಗೆ ಬ್ಯಾಂಗಲ್ಸ್ ಸ್ಟೋರ್, ಬಟ್ಟೆ ಮಳಿಗೆ ತೆರೆದಿದ್ದರು.ವರಲಕ್ಷ್ಮೀ ಸ್ತ್ರೀ ಶಕ್ತಿ ಸಂಘದ ಮೂಲಕ ಮಳಿಗೆ ಪಡೆದಿರುವ ಎಚ್.ಡಿ. ಕೋಟೆಯ ಸಿಂಧೂ ಅವರು, ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟ 12 ಸಾವಿರದಲ್ಲಿ ಸ್ಯಾಂಡ್‌ವಿಜ್ ಕಾರ್ನರ್ ಮಾರುತ್ತಿದ್ದಾರೆ. ಹಾಗೆಯೇ, ಎಚ್.ಡಿ. ಕೋಟೆಯ ದೃಷ್ಟಿ ವಿಶೇಷ ಚೇತನರಾದ ಶ್ರುತಿ ಅವರು ಕೂಡ 6 ತಿಂಗಳು ಕೂಡಿಟ್ಟ ಗೃಹಲಕ್ಷ್ಮಿ ಹಣದಿಂದ ಫ್ಯಾನ್ಸಿ ವಸ್ತುಗಳನ್ನು ತಂದು ವ್ಯಾಪಾರ ಮಾಡುತ್ತಿದ್ದಾರೆ. ಮೈಸೂರಿನ ವಿಜಯನಗರದ ನಿವಾಸಿ ಗಗನಾ ದೀಪಿಕಾ ಅವರು, ಗೃಹಲಕ್ಷ್ಮಿ ಹಣವನ್ನು ಉಳಿಸಿ ಬಟ್ಟೆಗಳನ್ನು ಖರೀದಿಸಿ ಮಾರುತ್ತಿದ್ದಾರೆ.
ಸಚಿವರಿಂದ ಉದ್ಘಾಟನೆ:ಮಹಿಳಾ ದಸರಾ ಉದ್ಘಾಟನೆಗೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರೀಕ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಮಳಿಗೆಗಳನ್ನು ಉದ್ಘಾಟಿಸಿದರು. ಪ್ರತಿ ಮಳಿಗೆಗಳಿಗೂ ತೆರಳಿದ ಸಚಿವರು, ಮಹಿಳಾ ಉದ್ದಿಮೆದಾರರು ಮತ್ತು ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರನ್ನು ಪ್ರೋತ್ಸಾಹಿಸಿದರು.