ಕನ್ನಡಪ್ರಭ ವಾರ್ತೆ ಭಾರತೀನಗರ
ರಾಷ್ಟ್ರದ ಅಭಿವೃದ್ದಿಗಾಗಿ ಪ್ರತಿಯೊಬ್ಬರೂ ತಮ್ಮ ಸ್ವಾರ್ಥ ಮನೋಭಾವವನ್ನು ಬಿಡಬೇಕು ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ತಿಳಿಸಿದರು.ಭಾರತೀ ಕಾಲೇಜಿನ ಆವರಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್, ರಾಜ್ಯ ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಆಶ್ರಯದಲ್ಲಿ ನಡೆದ ವಿಶ್ವ ಸಾಮಾಜಿಕ ನ್ಯಾಯ ಮತ್ತು ಭ್ರೂಣ ಹತ್ಯೆ ತಡೆಗಟ್ಟುವುದು, ಹೆಣ್ಣು ಮಕ್ಕಳ ಆಸ್ತಿ ಹಕ್ಕುಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಜನಸಾಮಾನ್ಯರಲ್ಲಿ ಹಸಿವು ಕಾಡುತ್ತಿದೆ. ನಾಗರೀಕ ಸಮಾಜವನ್ನು ಕಟ್ಟುವಂತಹ ಕೆಲಸ ನಮ್ಮ ಹೊಣೆಗಾರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಸಮಾಜದ ಬಗ್ಗೆ ಚಿಂತನೆ ಮಾಡುವ ಮತ್ತು ಜಾತಿ, ಲಂಚಮುಕ್ತ, ಅಪರಾಧ ತಡೆಯುವಂತಹ ಗುಣಗಳಿದೆಯೋ ಅಂತಹವರಿಗೆ ಮತಹಾಕಿ ಎಂದು ಸಲಹೆ ನೀಡಿದರು.ಭ್ರೂಣಹತ್ಯೆ ತಡೆಗಟ್ಟಿ:
ಜಿಲ್ಲೆಯಲ್ಲಿ ಹೆಣ್ಣುಭ್ರೂಣ ಹತ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯಬೇಕು. ಸಮಾಜದಲ್ಲಿ ಹೆಣ್ಣು, ಗಂಡುಗಳ ನಡುವೆ ಅಸಮಾನತೆ ಸಂಘರ್ಷ ಆಗಾಗ್ಗೆ ನಡೆಯುತ್ತಿದೆ. ಹೆಣ್ಣು ಸಮಾನತೆಯ ಸಂಕೇತ. ಪೋಷಕರು ತಮ್ಮ ಮನಸ್ಥಿತಿ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಹೆಣ್ಣು ಸಮಾಜದ ಭಾಗವಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ನೆಲೆಸುತ್ತದೆ. ಜಾತಿ, ಅಪರಾಧ, ಭ್ರಷ್ಟಚಾರ ಇವು ಸಮಾಜದಲ್ಲಿ ಕ್ಯಾನ್ಸರ್ ಖಾಯಿಲೆ ಇದ್ದಂತೆ. ಹೆಣ್ಣಿನ ಮೇಲೆ ಮೋಹವಿದ್ದಾಗ ಮಾತ್ರ ಅಪರಾಧವಾಗುತ್ತಿದೆ. ಹಣದ ಹಿಂದೆ ಓಡಿದಾಗ ಮಾತ್ರ ಭ್ರಷ್ಟಚಾರ ಶುರುವಾಗುತ್ತದೆ. ಇವೆಲ್ಲವನ್ನು ಮೆಟ್ಟಿ ನಿಲ್ಲುವಂತಹ ಕೆಲಸವನ್ನು ಸಾರ್ವಜನಿಕರು ಮಾಡಬೇಕು ಎಂದು ಹೇಳಿದರು.
ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ನ್ಯಾಯಾಲಯ ಇಲ್ಲದಿದ್ದರೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ನ್ಯಾಯಾಲಯವನ್ನು ಗೌರವಿಸಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.ವಿದ್ಯಾರ್ಥಿ ದಿಶೆಯಲ್ಲೇ ಕಾನೂನು ಅರಿವುಗಳ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಕಾನೂನಿನ ಚೌಕಟ್ಟಿನಲ್ಲಿ ಮುಂದಿನ ಪ್ರಜೆಗಳು ನಡೆಯಲು ಸಾಧ್ಯ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದರೆ ಮಕ್ಕಳಲ್ಲಿ ಕಾನೂನು ಅರಿವಿನ ಬಗ್ಗೆ ಜಾಗೃತಿ ಮೂಡುತ್ತದೆ ಎಂದರು.
ವೇದಿಕೆಯಲ್ಲಿ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರಾದ ಜೈಶಂಕರ್, ಕಿರಣ್, ನಂಜೇಗೌಡ, ಪಿ.ಎಂ.ಬಾಲಸುಭ್ರಮಣ್ಯ, ಕೆ.ಶ್ರೀ.ವಿದ್ಯಾ, ವಾಣಿ ಎ ಶೆಟ್ಟಿ, ಬಿ.ಪ್ರೀಯಾಂಕ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎನ್,ಶಿವಣ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪಿ.ಇ.ತಿಮ್ಮಯ್ಯ, ರಾಜ್ಯ ಮಹಿಳಾ ಮತ್ತು ಮಕ್ಕಳ ಸಂಸ್ಥೆ ಅಧ್ಯಕ್ಷೆ ರಜಿನಿರಾಜ್, ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಉಪಸ್ಥಿತರಿದ್ದರು.