ಕನ್ನಡಪ್ರಭ ವಾರ್ತೆ ಭದ್ರಾವತಿ
ಸ್ವಾರ್ಥರಹಿತ ಹೋರಾಟಗಾರರು ಎಂದಿಗೂ ತಮ್ಮ ಹೋರಾಟದಿಂದ ವಿಮುಖರಾಗುವುದಿಲ್ಲ. ಸಮಾಜ ಅವರ ಹೋರಾಟಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಹೇಳಿದರು.ಅವರು ಭಾನುವಾರ ನಗರದ ಕಾಮ್ರೇಡ್ ಡಿ.ಸಿ.ಮಾಯಣ್ಣ ಅಭಿಮಾನಿಗಳ ಸಂಘದ ವತಿಯಿಂದ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಲಲಾಗಿದ್ದ ಡಿ.ಸಿ ಮಾಯಣ್ಣನವರ ೯೦ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬರ ಬದುಕಿಗೂ ಬೆಲೆ ಇದೆ. ಇದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಮೂಲಭೂತವಾಗಿ ನಮಗೆ ಸಿಗಬೇಕಾದ ಹಕ್ಕುಗಳಿಂದ ವಂಚನೆ ಯಾದಾಗ ಅವುಗಳ ಕುರಿತು ಅರಿತುಕೊಳ್ಳುವ ಮೂಲಕ ಪುನಃ ಪಡೆದುಕೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿಯೇ ಹೋರಾಟಗಳು ರೂಪುಗೊಳ್ಳುವವು. ಹೋರಾಟದ ಮುಂಚೂಣಿ ನಾಯಕರು ಹೋರಾಟವನ್ನು ಸರಿ ದಾರಿಯಲ್ಲಿ ತೆಗೆದುಕೊಂಡು ಹೋಗುವ ಮೂಲಕ ತಮ್ಮ ಗುರು ತಲುಪಬೇಕು. ಡಿ.ಸಿ.ಮಾಯಣ್ಣನವರ ಹೋರಾಟ ಗಳು ಈ ದಾರಿಯಲ್ಲಿಯೇ ಸಾಗಿ ಬಂದಿವೆ. ಈ ಹಿನ್ನೆಲೆಯಲ್ಲಿ ಅವರನ್ನು ಗೌರವಿಸುವ ಮೂಲಕ ಅವರಿಗೆ ಭಗವಂತ ಮತ್ತಷ್ಟು ಆಯುರಾರೋಗ್ಯ ಕರುಣಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಬೇಕೆಂದರು.ಸಂಘದ ಪ್ರಧಾನ ಸಂಚಾಲಕ ಬಿ.ಎನ್.ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್, ಉದ್ಯಮಿಗಳಾದ ಬಿ.ಕೆ ಜಗನ್ನಾಥ, ಬಿ.ಕೆ.ಶಿವಕುಮಾರ್, ಎಂಪಿಎಂ ಕಾರ್ಖಾನೆ ಕಾರ್ಮಿಕ ಮುಖಂಡ ಟಿ.ಜಿ ಬಸವರಾಜಯ್ಯ, ವಿಐಎಸ್‌ಎಲ್ ಕಾರ್ಖಾನೆ ಕಾರ್ಮಿಕ ಮುಖಂಡ ಕಾಳೇಗೌಡ್ರು, ಡಿಎಸ್‌ಎಸ್ ಸಂಸ್ಥಾಪಕ ಕಾರ್ಯದರ್ಶಿ ಎಸ್.ಜಿ ರಾಜು, ಕಲಾವಿದ ಆಂಜನೇಯ, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಹಾಗು ಸಂಘದ ಅಧ್ಯಕ್ಷ ಸೀತಾರಾಮ್, ಮುಖಂಡರಾದ ಟಿ. ವೆಂಕಟೇಶ್, ನರಸಿಂಹಚಾರ್, ಕಬಡ್ಡಿ ಕೃಷ್ಣೇಗೌಡ, ಜಾನ್‌ಬೆನ್ನಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಗಾಯಕ ಹರೋನಹಳ್ಳಿ ಸ್ವಾಮಿ ಅವರಿಂದ ಗೀತಾ ಗಾಯನ ಹಾಗು ದೈಹಿಕ ಶಿಕ್ಷಕ, ಕಲಾವಿದ ಅಪೇಕ್ಷ ಮಂಜುನಾಥ್ ಅವರಿಂದ ನೃತ್ಯ ಪ್ರದರ್ಶನ ನಡೆಯಿತು. ಇದಕ್ಕೂ ಮೊದಲು ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಪತ್ರಿಮೆಗೆ ಮಾಲಾರ್ಪಣೆ ಮಾಡಲಾಯಿತು.