ನಿಸ್ವಾರ್ಥ ಸಮಾಜ ಸೇವೆಯೇ ದೇವರಿಗೊಪ್ಪಿಸುವ ಭಕ್ತಿಯ ಕಾಣಿಕೆ: ಸುತ್ತೂರುಶ್ರೀ

KannadaprabhaNewsNetwork |  
Published : May 14, 2026, 12:45 AM IST
ಸಮಾಜ ಸೇವೆಯೇ ಭಕ್ತಿಯ ಸಂಪತ್ತು ಹೆಚ್ಚಿಸಿಕೊಳ್ಳುವ ಉತ್ತಮ ಮಾರ್ಗ: ಸುತ್ತೂರು ಶ್ರೀ | Kannada Prabha

ಸಾರಾಂಶ

ಈ ಮನುಕುಲ ಪವಿತ್ರವಾಗಲು, ನಮಗೆ ಜನ್ಮ ನೀಡಿದ ಜನನಿ ಕೃತಾರ್ಥರಾಗಲು, ಭೂಮಿ ಮನುಕುಲಕ್ಕೆ ಪುಣ್ಯವತಿಯಾಗಲು, ಭಗವಂತನ ಸ್ಮರಣೆ ಜೊತೆಗೆ ಸಮಾಜ ಸೇವೆ ಕೂಡ ಮಾಡಬೇಕು. ಬದುಕು ತೆರೆದ ಪುಸ್ತಕವಾಗಬೇಕು, ಆಗ ದೈವ ಬಲ ಹಾಗೂ ಗುರುಕುಲ ಲಭಿಸುತ್ತದೆ. ಸಮಾಜ ಸೇವೆ ನನಗಲ್ಲ ನಿನಗೆ ಎಂಬ ತತ್ವಕ್ಕೆ ಬದ್ಧರಾಗಿ ಯಾರಿಗೂ ತಿಳಿಯದಂತೆ ನಿರಂತರವಾಗಿರಬೇಕು. ಆಗ ಸಂಸ್ಕಾರ ಎಲ್ಲಾ ಮನೆಗಳನ್ನೂ ತಲುಪುತ್ತದೆ, ಈ ನಿಟ್ಟಿನಲ್ಲಿ ದುಗ್ಗಹಟ್ಟಿ ವೀರಭದ್ರಪ್ಪ ಹಾಗೂ ಅವರ ಕುಟುಂಬದ ಸದಸ್ಯರು ಇತರರಿಗೆ ಮಾದರಿಯಾಗುತ್ತಾರೆ.

ಕನ್ನಡಪ್ರಭ ವಾರ್ತೆ ಯಳಂದೂರು

ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸಮಾಜ ಸೇವೆ ಮಾಡುವುದೇ ದೇವರಿಗೆ ನಾವು ನೀಡುವ ಭಕ್ತಿಯ ಕಾಣಿಕೆಯಾಗಿದೆ. ಈ ದಿಸೆಯಲ್ಲಿ ಸಾಗಿದರೆ ಮಾತ್ರ ದೇವರು ಪ್ರಸನ್ನವಾಗುತ್ತಾರೆ, ಹಾಗಾಗಿ ಈ ಮಾರ್ಗದ ಅನುಸರಣೆ ಇಂದಿನ ಅಗತ್ಯತೆಯಾಗಿದೆ ಎಂದು ಸುತ್ತೂರು ವೀರ ಸಿಂಹಾಸನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಕರೆ ನೀಡಿದರು.

ಅವರು ಬುಧವಾರ ತಾಲೂಕಿನ ಗಂಗವಾಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿವಲಿಂಗ, ಗಣಪತಿ ಮತ್ತು ಉಪ್ಪರಿಗೆ ಬಸವೇಶ್ವರರ ಬೆಳ್ಳಿ ಕವಚ ಧಾರಣೆ ಹಾಗೂ ಕೀರ್ತಿ ಶೇಷ ಶ್ರೀ ದುಗ್ಗಹಟ್ಟಿ ವೀರಭದ್ರಪ್ಪ ಸ್ಮಾರಕ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ನಮ್ಮ ಕೆಲಸ ನಾವು ನಿಷ್ಠೆಯಿಂದ ಮಾಡಿದಾಗ ಅದರಲ್ಲಿ ದೈವತ್ವದ ಗುಣಗಳನ್ನು ಪಡೆದುಕೊಳ್ಳಬಹುದು. ಸರ್ವ ದುಃಖ ನಿವಾರಣೆಗೆ ಪ್ರಾಮಾಣಿಕ ಸಮಾಜ ಸೇವೆಯೇ ಮದ್ದಾಗಿದೆ. ಈ ನಿಟ್ಟಿನಲ್ಲಿ ದುಗ್ಗಹಟ್ಟಿ ವೀರಭದ್ರಪ್ಪ ತಮ್ಮ ಜೀವನದುದ್ದಕ್ಕೂ ಇದನ್ನೇ ಅಳವಡಿಸಿಕೊಂಡಿದ್ದರು. ಮಠದೊಂದಿಗೆ ಅನ್ಯೋನ್ಯ ಸಂಪರ್ಕ ಹೊಂದಿದ್ದರು, ಅವರ ಅವಧಿಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳು ನಡೆದಿದ್ದು, ದೇಗುಲಗಳ ಜೀರ್ಣೋದ್ಧಾರ, ರಸ್ತೆಗಳ ಅಭಿವೃದ್ಧಿ, ಗ್ರಾಮ ಅಭಿವೃದ್ಧಿಯಂಥ ಸಮಾಜಪರ ಕಳಕಳಿ ಹೊಂದಿದ್ದ ಧೀಮಂತ ವ್ಯಕ್ತಿಯಾಗಿದ್ದು, ಯಳಂದೂರು ತಾಲೂಕು ಹಾಗೂ ಚಾಮರಾಜನಗರ ಜಿಲ್ಲೆಯ ಅತ್ಯಂತ ಮಹನೀಯರಾಗಿದ್ದರು. ಇವರ ಪುತ್ರರಾದ ವಿ. ಗಂಗಾಧರಸ್ವಾಮಿ ತಮ್ಮ ಮಗನ ವಿವಾಹದ ನೆನಪಿನಲ್ಲಿ ಇಂತಹ ಸಮಾಜಪರ ಕಾರ್ಯಕ್ರಮ ಮಾಡುತ್ತಿರುವುದು ಇತರರಿಗೂ ಮಾದರಿಯಾಗಲಿ, ದುಂದುವೆಚ್ಚದ ಬದಲು ಅವರ ತಂದೆಯ ಹಾದಿಯಲ್ಲಿ ಸಮಾಜ ಸೇವೆ ಮಾಡುತ್ತಿರುವ ಇಂತಹವರ ಸಂಖ್ಯೆ ಹೆಚ್ಚಬೇಕು. ಗಂಗವಾಡಿ ಗ್ರಾಮದ ವೀರಭದ್ರೇಶ್ವರ ದೇಗುಲವು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರಸಿದ್ಧ ದೇಗುಲವಾಗಿದ್ದು, ಇಂತಹ ಸ್ಥಳದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯುತ್ತಿರುವುದು ಮಾದರಿಯಾಗಿದೆ ಎಂದು ತಿಳಿಸಿದರು.

ಸಿದ್ಧಗಂಗಾ ಮಠದ ಕಿರಿಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಈ ಮನುಕುಲ ಪವಿತ್ರವಾಗಲು, ನಮಗೆ ಜನ್ಮ ನೀಡಿದ ಜನನಿ ಕೃತಾರ್ಥರಾಗಲು, ಭೂಮಿ ಮನುಕುಲಕ್ಕೆ ಪುಣ್ಯವತಿಯಾಗಲು, ಭಗವಂತನ ಸ್ಮರಣೆ ಜೊತೆಗೆ ಸಮಾಜ ಸೇವೆ ಕೂಡ ಮಾಡಬೇಕು. ಬದುಕು ತೆರೆದ ಪುಸ್ತಕವಾಗಬೇಕು, ಆಗ ದೈವ ಬಲ ಹಾಗೂ ಗುರುಕುಲ ಲಭಿಸುತ್ತದೆ. ಸಮಾಜ ಸೇವೆ ನನಗಲ್ಲ ನಿನಗೆ ಎಂಬ ತತ್ವಕ್ಕೆ ಬದ್ಧರಾಗಿ ಯಾರಿಗೂ ತಿಳಿಯದಂತೆ ನಿರಂತರವಾಗಿರಬೇಕು. ಆಗ ಸಂಸ್ಕಾರ ಎಲ್ಲಾ ಮನೆಗಳನ್ನೂ ತಲುಪುತ್ತದೆ, ಈ ನಿಟ್ಟಿನಲ್ಲಿ ದುಗ್ಗಹಟ್ಟಿ ವೀರಭದ್ರಪ್ಪ ಹಾಗೂ ಅವರ ಕುಟುಂಬದ ಸದಸ್ಯರು ಇತರರಿಗೆ ಮಾದರಿಯಾಗುತ್ತಾರೆ ಎಂದರು.

ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ನಮ್ಮ ತಾಲೂಕಿಗೆ ದುಗ್ಗಹಟ್ಟಿ ಪಿ. ವೀರಭದ್ರಪ್ಪ ಕೊಡುಗೆ ಅಪಾರ. ಅವರು ತಾವು ಬದುಕಿರುವವರೆಗೂ ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಈಗ ಅವರ ಮಕ್ಕಳು ಇದೇ ಸಂಸ್ಕಾರವನ್ನು ಮುಂದುವರಿಸುತ್ತಿರುವುದು ಸಂತಸದ ಸಂಗತಿಯಾಗಿದೆ, ಗಂಗವಾಡಿ ಗ್ರಾಮದ ವೀರಭದ್ರದೇಶ್ವರ ದೇಗುಲ ಐತಿಹಾಸಿಕ ದೇಗುಲವಾಗಿದ್ದು, ಇಲ್ಲಿಗೆ ರಸ್ತೆ ಸಂಪರ್ಕ ಕಲ್ಪಿಸಲು ಇನ್ನು ಅನುದಾನ ಬಿಡುಗಡೆಯಾಗದಿದ್ದರೂ ನನ್ನ ಮನವಿ ಮೇರೆಗೆ ಗುತ್ತಿಗೆದಾರರು ತಾತ್ಕಾಲಿಕ ರಸ್ತೆ ನಿರ್ಮಿಸಿದ್ದಾರೆ. ಕೂಡಲೇ ಇದರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಇದೇ ವೇಳೆ ಬಿ.ಎಸ್. ವಿನಯ್ ಸಂಪಾದಕತ್ವದ ರುದ್ರಾಂಶ ಸಂಭೂತ ಶ್ರೀ ವೀರಭದ್ರೇಶ್ವರ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ದೇವನೂರು ದಾಸೋಹ ಮಠದ ಶ್ರೀ ಮಹಾಂತ ಸ್ವಾಮೀಜಿ, ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ವಿ. ಗಂಗಾಧರಸ್ವಾಮಿ, ಜಿ.ವಿಶ್ವಾಸ್, ಡಿ.ಎಂ. ಅಂಕಿತ, ಜಿ. ಸುಹಾಸ್, ವಿ. ಮಲ್ಲಿಕಾರ್ಜುನಸ್ವಾಮಿ, ಸುಜಾತ ಸೇರಿ ವಿವಿಧ ಮಠಗಳ ಸ್ವಾಮೀಜಿಗಳು, ಗಣ್ಯರು, ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡೀಸೆಲ್‌ ಬೆಲೆ ಏರಿಕೆಯಾದ್ರೆ ಸಮಸ್ಯೆ: ಸಚಿವ ರೆಡ್ಡಿ
ಕಿರಿ ವಯಸ್ಸಲ್ಲೇ ಮರೆಯಾದ ನಟ ದಿಲೀಪ್‌ ರಾಜ್‌