ಅಕ್ರಮವಾಗಿ ಸೈಬರ್ ವಂಚಕರಿಗೆ ತನ್ನ ಸ್ನೇಹಿತನೊಬ್ಬನ ಬ್ಯಾಂಕ್ ಖಾತೆಯನ್ನು ಮಾರಾಟ ಮಾಡಿ ₹7 ಕೋಟಿ ಹಣ ವರ್ಗಾವಣೆಗೆ ನೇರವಾಗಿದ್ದ ಆರೋಪದ ಮೇರೆಗೆ ಖಾಸಗಿ ಎಂಜಿನಿಯರ್ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಉತ್ತರ ವಿಭಾಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಕ್ರಮವಾಗಿ ಸೈಬರ್ ವಂಚಕರಿಗೆ ತನ್ನ ಸ್ನೇಹಿತನೊಬ್ಬನ ಬ್ಯಾಂಕ್ ಖಾತೆಯನ್ನು ಮಾರಾಟ ಮಾಡಿ ₹7 ಕೋಟಿ ಹಣ ವರ್ಗಾವಣೆಗೆ ನೇರವಾಗಿದ್ದ ಆರೋಪದ ಮೇರೆಗೆ ಖಾಸಗಿ ಎಂಜಿನಿಯರ್ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಉತ್ತರ ವಿಭಾಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆ ಸಮೀಪದ ಪ್ರತಿಷ್ಠಿತ ಎಂಜಿನಿಯರ್ ವಿದ್ಯಾರ್ಥಿ ವಂಚನೆಗೆ ಒಳಗಾಗಿದ್ದು, ಈ ಸಂಬಂಧ ವಿಜಯನಗರದ ಜಿಲ್ಲೆ ಹೊಸಪೇಟೆಯ ಇ.ಆಯುಷ್ ಎಂಬಾತನ್ನು ಬಂಧಿಸಲಾಗಿದೆ. ಇತ್ತೀಚಿಗೆ ಸಂತ್ರಸ್ತ ವಿದ್ಯಾರ್ಥಿ ಬ್ಯಾಂಕ್ ಖಾತೆಯಲ್ಲಿ ಕೋಟಿಗಟ್ಟಲೇ ಹಣ ವಹಿವಾಟು ನಡೆದಿದ್ದರಿಂದ ಶಂಕೆಗೊಂಡು ಬ್ಯಾಂಕ್ ಅಧಿಕಾರಿಗಳು ವಿಚಾರಿಸಿದಾಗ ವಂಚನೆ ಬೆಳಕಿಗೆ ಬಂದಿದೆ.
ಹೇಗೆ ವಂಚನೆ?:
ವರ್ಷದ ಹಿಂದೆ ಸಂತ್ರಸ್ತನಿಗೆ ಖಾಸಗಿ ಕಾಲೇಜಿನ ವಿದ್ಯಾರ್ಥಿ ಆಯುಷ್ ಪರಿಚಯವಾಗಿದ್ದು, ಬಳಿಕ ಇಬ್ಬರಲ್ಲಿ ಆತ್ಮೀಯತೆ ಬೆಳೆದಿದೆ. ಆಗ ಗೆಳೆಯನಿಗೆ ಖಾತೆಯಲ್ಲಿ ಕಡಿಮೆ ಮೊತ್ತವಿರುವ ಕಾರಣಕ್ಕೆ ನನ್ನ ಬ್ಯಾಂಕ್ ಖಾತೆ ಸ್ಥಗಿತವಾಗಿದೆ. ಹೀಗಾಗಿ ಹಣಕಾಸು ವಹಿವಾಟಿಗೆ ನಿನ್ನ ಬ್ಯಾಂಕ್ ಖಾತೆಯನ್ನು ಸ್ಪಲ್ವ ದಿನಗಳ ಮಟ್ಟಿಗೆ ಬಳಸಿಕೊಳ್ಳುವೆ ಎಂದು ಆರೋಪಿ ಕೋರಿದ್ದ.
ಈ ಮಾತು ನಂಬಿದ ಸಂತ್ರಸ್ತ, ನವೆಂಬರ್‌ನಲ್ಲಿ ಗೆಳೆಯನಿಗೆ ಕರ್ನಾಟಕ ಬ್ಯಾಂಕ್ ಖಾತೆಯ ಪಾಸ್‌ಬುಕ್, ಎಂಟಿಎಂ ಕಾರ್ಡ್ ಹಾಗೂ ಆನ್‌ಲೈನ್ ಬ್ಯಾಂಕಿಂಗ್ ವಿವರ ಕೊಟ್ಟಿದ್ದಾನೆ. ಅಲ್ಲದೆ ಈ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಏರ್‌ಟೆಲ್ ಸಿಮ್ ಕಾರ್ಡ್ ಅನ್ನು ಸಹ ಗೆಳೆಯನಿಗೆ ಕೊಟ್ಟಿದ್ದ. ಈ ವಿಶ್ವಾಸಕ್ಕೆ ದ್ರೋಹ ಬಗೆದ ಆತ, ಸೈಬರ್ ವಂಚನೆ ಕೃತ್ಯಗಳ ಹಣ ವರ್ಗಾವಣೆಗೆ ಬಳಸಿದ್ದಾನೆ.
ಇತ್ತ ಸಂತ್ರಸ್ತನ ಖಾತೆಯಲ್ಲಿ ಏಕಾಏಕಿ ದೊಡ್ಡ ಮೊತ್ತ ಹಣ ವರ್ಗಾವಣೆ ನಡೆದಿರುವುದು ಗಮನಿಸಿದ ಬ್ಯಾಂಕ್ ಅಧಿಕಾರಿಗಳು, ಆ ಬ್ಯಾಂಕ್ ಖಾತೆ ವಿವರ ಕಲೆ ಹಾಕಿದಾಗ ದುರುಪಯೋಗ ಸಂಗತಿ ಗೊತ್ತಾಗಿದೆ. ಕೂಡಲೇ ಸಂತ್ರಸ್ತನಿಗೆ ಮಾಹಿತಿ ನೀಡಿದ್ದಾರೆ. ತನ್ನ ಬ್ಯಾಂಕ್ ಖಾತೆಯಲ್ಲಿ 7 ಕೋಟಿ ಹಣ ವರ್ಗಾವಣೆ ವಿಷಯ ತಿಳಿದು ಆಘಾತಗೊಂಡಿದ್ದಾನೆ. ಬಳಿಕ ವಿಚಾರಣೆ ನಡೆಸಿದಾಗ ಸತ್ಯ ಗೊತ್ತಾಯಿತು. ಕೂಡಲೇ ಸೈಬರ್ ಕ್ರೈಂ ಠಾಣೆಗೆ ವಿದ್ಯಾರ್ಥಿ ದೂರು ಸಲ್ಲಿಸಿದ್ದಾನೆ. ಈ ದೂರಿನ ಮೇರೆಗೆ ತನಿಖೆಗಿಳಿದಾಗ ಆಯುಷ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಟೆಲಿಗ್ರಾಂನಲ್ಲಿ ಖಾತೆ ಮಾರಾಟ
ಟೆಲಿಗ್ರಾಂ ಆ್ಯಪ್‌ನಲ್ಲಿ ಸೈಬರ್ ವಂಚನೆ ಜಾಲದ ಸದಸ್ಯರಿಗೆ ತನ್ನ ಸ್ನೇಹಿತನ ಬ್ಯಾಂಕ್ ಖಾತೆಯನ್ನು ಆರೋಪಿ ಮಾರಾಟ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಂಕ್ ಖಾತೆಗಳ ಬಾಡಿಗೆಗೆ ಜಾಹೀರಾತು ನೀಡುತ್ತಾರೆ. ಆಗ ಹಣದಾಸೆಗೆ ಸ್ನೇಹಿತನ ಬ್ಯಾಂಕ್ ಖಾತೆಯನ್ನು ಆತ ಮಾರಾಟ ಮಾಡಿದ್ದ. ಇದಕ್ಕೆ ಪ್ರತಿಯಾಗಿ ಈತನಿಗೆ ಕಮಿಷನ್ ಸಿಕ್ಕಿದೆ. ಆದರೆ ಎಷ್ಟು ಹಣ ಸಂದಾಯವಾಗಿದೆ ಎಂಬ ಬಗ್ಗೆ ವಿವರ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.