ಪಾಕ್‌ ಪ್ರಜೆಗಳ ವಾಪಸ್‌ ಕಳುಹಿಸಿ : ಪರಮೇಶ್ವರ್

KannadaprabhaNewsNetwork | Updated : Apr 27 2025, 09:31 AM IST

ಸಾರಾಂಶ

ರಾಜ್ಯದಲ್ಲಿರುವ ಪಾಕ್‌ ಪ್ರಜೆಗಳನ್ನು ಹುಡುಕಿ ವಾಪಸ್‌ ಕಳುಹಿಸಲು ಎಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ತಿಳಿಸಿದರು.

  ಬೆಂಗಳೂರು : ರಾಜ್ಯದಲ್ಲಿರುವ ಪಾಕ್‌ ಪ್ರಜೆಗಳನ್ನು ಹುಡುಕಿ ವಾಪಸ್‌ ಕಳುಹಿಸಲು ಎಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ತಿಳಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಪಾಕ್‌ ಪ್ರಜೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಈ ಕುರಿತು ಕೇಂದ್ರ ಸರ್ಕಾರದ ಗೃಹ ಸಚಿವಾಲಯದಿಂದ ಸೂಚನೆ ಬಂದಿದೆ. ಅಧಿಕೃತವಾಗಿ ಇರುವವರನ್ನು ಕಳುಹಿಸಲು ತಕರಾರಿಲ್ಲ. ಅನಧಿಕೃತವಾಗಿ ಇರುವವರ ಕುರಿತು ಪರಿಶೀಲಿಸಲಾಗುತ್ತಿದೆ. ದೀರ್ಘಕಾಲದ ವೀಸಾ ಹೊಂದಿರುವವರಿಗೆ ಕೇಂದ್ರ ಸರ್ಕಾರವೇ ವಿನಾಯಿತಿ ನೀಡಿದೆ ಎಂದರು.

ಪ್ರವಾಸಿಗರು ಸೇರಿ ಒಂದು ರೀತಿಯ ವೀಸಾ ಹೊಂದಿರುವವರನ್ನು ವಾಪಸ್‌ ಕಳುಹಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಿರುವುದು ಕಂಡುಬಂದಿಲ್ಲ. ಹಾಗಾಗಿ ಅವರನ್ನೂ ವಾಪಸ್‌ ಕಳುಹಿಸುವುದು ಅನಿವಾರ್ಯ. ಎಷ್ಟು ಜನ ಪಾಕ್‌ ಪ್ರಜೆಗಳಿದ್ದಾರೆಂದು ಈ ಕ್ಷಣಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಎಲ್ಲೆಡೆ ಪರಿಶೀಲನೆ ನಡೆಯುತ್ತಿದೆ. ಪಹಲ್ಗಾಂ ದಾಳಿ ನಂತರ ಎಲ್ಲಾ ಭಾಗದಲ್ಲೂ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಭದ್ರತಾ ವೈಫಲ್ಯ ಖಂಡಿಸಿ ಪ್ರಧಾನಿ ಮೋದಿ ಅವರ ರಾಜೀನಾಮೆ ಕೇಳಿರುವ ಕುರಿತು ನನಗೆ ಮಾಹಿತಿ ಇಲ್ಲ. ಅವರ ಹೇಳಕೆ ಯಾವ ಅರ್ಥದಲ್ಲಿದೆ ಎಂಬುದನ್ನು ತಿಳಿದು ನಂತರ ಪ್ರತಿಕ್ರಿಯೆಸುತ್ತೇನೆ. ಪಹಲ್ಗಾಂ ದಾಳಿಯಲ್ಲಿ ಭದ್ರತಾ ವೈಫಲ್ಯ ಇದೆ ಎಂದು ಎಲ್ಲರಿಗೂ ಗೊತ್ತಿದೆ. ನಾನೂ ಸೇರಿ ಪ್ರತಿಯೊಬ್ಬರೂ ಅದನ್ನು ಪ್ರಸ್ತಾಪಿಸಿದ್ದೇವೆ ಎಂದರು.

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾರಾವ್‌ ಅವರಿಂದ ಶಿಷ್ಟಾಚಾರ ಉಲ್ಲಂಘನೆ ಕುರಿತು ಹಿರಿಯ ಅಧಿಕಾರಿ ತನಿಖೆ ನಡೆಸಿ ಮುಖ್ಯ ಕಾರ್ಯದರ್ಶಿ ಅವರಿಗೆ ವರದಿ ನೀಡಿದ್ದಾರೆ. ವರದಿಯಲ್ಲೇನಿದೆ ಎಂಬುದು ಗೊತ್ತಿಲ್ಲ. ಆದರೆ ವರದಿಯಲ್ಲಿನ ಶಿಫಾರಸುಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

Share this article