ಗದಗ: ಮಾನವ ಜನ್ಮದ ಕೊನೆಯ ಹಂತದಲ್ಲಿರುವ ವಯೋವೃದ್ಧ ಮತ್ತು ಹಿರಿಯ ನಾಗರಿಕರಿಗೆ ಅವರ ರಕ್ಷಣೆ, ಪಾಲನೆ ಪೋಷಣೆ ದೃಷ್ಟಿಯಿಂದ ಅವರ ಪರವಾಗಿರುವ ಕಾನೂನುಗಳ ತಿಳಿವಳಿಕೆಯ ಅವಶ್ಯಕತೆ ಬಹುಮುಖ್ಯವಾಗಿದ್ದು, ಹಿರಿಯ ನಾಗರಿಕರು ಆ ಕಾನೂನುಗಳನ್ನು ಆಸಕ್ತಿಯಿಂದ ತಿಳಿದುಕೊಳ್ಳಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎಸ್. ಶಿವನಗೌಡ್ರ ಹೇಳಿದರು.
ನಗರದ ಜೀವನಜ್ಯೋತಿ ಸೇವಾ ಸಂಸ್ಥೆ ಅಡಿಯಲ್ಲಿಯ ಶಿವರತ್ನ ವೃದ್ಧಾಶ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸಿದ್ದೇಶ್ವರ ವಿದ್ಯಾಪೀಠ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಸಹಯೋಗದಲ್ಲಿ ಜರುಗಿದ ಹಿರಿಯ ನಾಗರಿಕರಿಗಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಜನ್ಮದಲ್ಲಿ ಶೈಶಾವಸ್ಥೆ, ಬಾಲ್ಯಾವಸ್ಥೆ, ಯೌವ್ವನಾವಸ್ಥೆ ಮತ್ತು ವೃದ್ಧಾಪ್ಯ ಎಂಬ ಹಂತಗಳು ಬರಲಿದ್ದು, ಅವುಗಳಲ್ಲಿ ಕೊನೆಯ ಹಂತವೇ ವೃದ್ಧಾಪ್ಯವಾಗಿದೆ, ವೃದ್ಧಾಪ್ಯದಲ್ಲಿ ಅವರು ಮುಗ್ಧ ಮಗುವಿನಂತೆ ವರ್ತಿಸುತ್ತಾರೆ, ಅವರ ಮಕ್ಕಳು ಅವರನ್ನು ಮಕ್ಕಳಂತೇ ಲಾಲನೆ ಪಾಲನೆ ಪೋಷಣೆ ಮಾಡಬೇಕಿದೆ, ಇಂದಿನ ದಿನಮಾನದಲ್ಲಿ ಕೆಲ ಬೆರಳಣಿಕೆ ಮಕ್ಕಳ ನಿರಾಸಕ್ತಿ ಮತ್ತು ನಿರ್ಲಕ್ಷ್ಯದಿಂದಾಗಿ ವಯೋವೃದ್ಧರು ಹಾಗೂ ಹಿರಿಯ ನಾಗರಿಕರು ಇಂತಹ ಕೇಂದ್ರಗಳನ್ನು ಅವಲಂಬಿಸಬೇಕಾಗಿದೆ. ಆದರೂ ತಾವೂ ಭಯ ಮತ್ತು ಆತಂಕ ಪಡಬೇಕಾಗಿಲ್ಲ. ತಮ್ಮ ರಕ್ಷಣೆ, ಲಾಲನೆ, ಪಾಲನೆ ಮತ್ತು ಪೋಷಣೆಗಾಗಿಯೇ ಕೆಲವೊಂದು ಕಾನೂನುಗಳು ಅನುಷ್ಠಾನಕ್ಕೆ ಬಂದಿವೆ. ಅವುಗಳ ಬಗ್ಗೆ ತಾವೂ ತಿಳಿದುಕೊಳ್ಳುವದು ಅತಿ ಅವಶ್ಯವಾಗಿದೆ. ಆ ಮೂಲಕ ತಮ್ಮ ಭವಿಷ್ಯ ಉಜ್ವಲವಾಗಲಿದೆ. ತಮ್ಮ ಮುಗ್ಧತೆಯ ದುರುಪಯೋಗ ಪಡಿಸಿಕೊಂಡು ಮಕ್ಕಳು ತಮಗೆ ಮನೆಯಿಂದ ಹೊರ ಹಾಕಿದರೇ ತಾವೂ ಅವರಿಂದ ಜೀವನಾಂಶ ಪಡೆಯಲು ಅರ್ಹತೆಯನ್ನು ಹೊಂದಿರುತ್ತಿರಿ ಎಂದರು.ಜಿಲ್ಲಾ ವಿಶೇಷಚೇತನ ಕಲ್ಯಾಣ ಅಧಿಕಾರಿ ಕೆ. ಮಹಾಂತೇಶ ಮಾತನಾಡಿ, ಹಿರಿಯ ನಾಗರಿಕರಿಗೆ ಕಾನೂನಿನ ತಿಳುವಳಿಕೆ ಅವಶ್ಯವಾಗಿತ್ತು. ಈ ಬಗ್ಗೆ ಅರಿವು ಮೂಡಿಸುವ ವಿಚಾರ ವಿಶೇಷಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬಯಸಿತ್ತು. ಗದಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಿರಿಯ ನಾಗರಿಕರ ಪರವಾಗಿರುವ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಿರುವುದಕ್ಕೆ ಇಲಾಖೆಯಿಂದ ಅಭಿನಂದನೆ ಸಲ್ಲಿಸಿದರು.ಜೀವನಜ್ಯೋತಿ ಸೇವಾ ಸಂಸ್ಥೆಯ ನಿರ್ದೇಶಕ ಮಂಜುನಾಥ ಶಿವಪ್ಪ ಮುಳಗುಂದ ಮಾತನಾಡಿದರು.ಈ ಸಂದರ್ಭದಲ್ಲಿ ಶರಣಗೌಡ ಬಿರಾದಾರ ಹಾಗೂ ವಯೋವೃದ್ದರು, ಹಿರಿಯ ನಾಗರಿಕರು ಇದ್ದರು.