ಚಿತ್ರದುರ್ಗ: ಹಿರಿಯ ನಾಗರಿಕರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ಹಿರಿಯ ನಾಗರಿಕರನ್ನು ಗೌರವಿಸಿ, ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕು. ಯಾರೂ ಸಹ ಹಿರಿಯ ನಾಗರಿಕರನ್ನು ನಿರ್ಲಕ್ಷಿಸಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ರೋಣ ವಾಸುದೇವ್ ಹೇಳಿದರು.
ಮನೆಯಲ್ಲಿ ಹಿರಿಯ ನಾಗರಿಕರ ಮಾರ್ಗದರ್ಶನ ಇಲ್ಲದೇ ಇತ್ತೀಚಿನ ದಿನಗಳಲ್ಲಿ ವೈವಾಹಿಕ ಹಾಗೂ ಆಸ್ತಿ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಹಿರಿಯರ ಮಾರ್ಗದರ್ಶನದಿಂದ ನಮ್ಮ ನಡೆತೆಗಳನ್ನು ತಿದ್ದಿಕೊಳ್ಳಬಹುದಾಗಿದೆ. ಅಂತಹ ಹಿರಿಯ ನಾಗರಿಕರನ್ನು ಮನೆಯಿಂದ ಹೊರಗಡೆ ಹಾಕಿದಾಗ ಕಿರಿಯರಿಗೆ ಸಕಾಲದಲ್ಲಿ ಸೂಕ್ತ ರೀತಿಯ ಸಲಹೆ ಸಿಗದೇ, ಚಿಕ್ಕ ಚಿಕ್ಕ ವಿಷಯಗಳಿಗೂ ಜಗಳ ಮಾಡಿಕೊಂಡು ನ್ಯಾಯಾಲಯಕ್ಕೆ ಬರುತ್ತಾರೆ ಎಂದು ತಿಳಿಸಿದ ಅವರು, ದೇವಸ್ಥಾನದಲ್ಲಿರುವ ದೇವರಂತೆ ಮನೆಯಲ್ಲಿ ಇರುವ ಹಿರಿಯ ನಾಗರಿಕರು ಸಹ ಪೂಜ್ಯನೀಯ ಎಂದು ಹೇಳಿದರು.
ರಾಜ್ಯದಲ್ಲಿ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಕಾನೂನು ಸಲಹಾ ಕೇಂದ್ರ ಉದ್ಘಾಟನೆ ನೆರವೇರಿಸಲಾಗಿದ್ದು, ಹಿರಿಯ ನಾಗರಿಕರು ಸಲಹಾ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಹಿರಿಯ ನಾಗರಿಕರನ್ನು ಗೌರವಿಸಿ, ಅವರಿಗೆ ಸಿಗಬೇಕಾದ ಸೌಲಭ್ಯ ನೀಡಿದರೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಮೂಲಕ ಸಹಾಯ ಪಡೆಯುವ ಸಂದರ್ಭ ಬರುವುದಿಲ್ಲ ಎಂದು ಹೇಳಿದರು.ಉಪ ವಿಭಾಗಾಧಿಕಾರಿ ಮೆಹಬೂಬ್ ಜೀಲಾನಿ ಖುರೇಷಿ ಮಾತನಾಡಿ, ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹಿರಿಯ ನಾಗರಿಕರಿಗೆ ಸಂಬಂಧಿಸಿದಂತೆ 35 ಪ್ರಕರಣಗಳನ್ನು ಗುರುತಿಸಿಕೊಂಡು, ಇದರಲ್ಲಿ 19 ಪ್ರಕರಣಗಳು ವಿಲೇವಾರಿ ಮಾಡಲಾಗಿದ್ದು, 6 ಪ್ರಕರಣಗಳಲ್ಲಿ ಹಿರಿಯ ನಾಗರಿಕರ ಆಸ್ತಿಯನ್ನು ವಾಪಾಸ್ಸು ನೋಂದಣಿ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಸರ್ಕಾರದ ನಿರ್ದೇಶನದಂತೆ ಪ್ರತಿ ತಾಲ್ಲೂಕಿನ ಆಯಾ ಹೋಬಳಿ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಸಮರ್ಪಕವಾಗಿ ತಲುಪಿಸಲಾಗುತ್ತಿದೆ ಎಂಬ ಕುರಿತು ಪಿಂಚಣಿ ಅದಾಲತ್ ನಡೆಸಲಾಗುತ್ತಿದೆ. ಪಿಂಚಣಿ ಅದಾಲತ್‍ನಲ್ಲಿ ಹಿರಿಯ ನಾಗರಿಕರ ಕುಂದು ಕೊರತೆ ಆಲಿಸಿ, ಪರಿಹಾರ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರ ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯ ಒದಗಿಸಿದೆ. ಜತೆಗೆ ಅವರಿಗಾಗಿಯೇ ಕಾನೂನು ಭದ್ರತೆ ಒದಗಿಸಿದೆ. ಆದರೆ ಅಸಮರ್ಥ ಕಾಲಘಟ್ಟದಲ್ಲಿ ಹಿರಿಯ ಜೀವಗಳಿಗೆ ನೋವುಂಟು ಮಾಡುವ ಕೆಲಸ ಮಾಡಬಾರದು. ಅವರ ಅವಶ್ಯಕತೆಗಳಿಗೆ ಮಕ್ಕಳು ಭದ್ರತೆಯಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಶಾಮುಕ್ತ ಭಾರತ ಅಭಿಯಾನ ಯೋಜನೆಯಡಿ ಮಾದಕ ವಸ್ತು ಸೇವನೆ ಮಾಡದೇ ಇರುವುದಾಗಿ ಜಿಲ್ಲಾ ಅಂವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರತಿಜ್ಞಾವಿಧಿ ಬೋಧಿಸಿದರು. ಹಿರಿಯ ನಾಗರಿಕರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ತಹಶೀಲ್ದಾರ್ ಗೋವಿಂದರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯ್ ಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಕಾರ್ಯದರ್ಶಿ ಆರ್.ಗಂಗಾಧರ್, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರೇಮನಾಥ್, ಹಿರಿಯ ನಾಗರಿಕರ ಜಿಲ್ಲಾ ಸಂಘ ಅಧ್ಯಕ್ಷ ರಂಗಪ್ಪ ರೆಡ್ಡಿ, ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಶಂಕರಪ್ಪ ಸೇರಿದಂತೆ ಹಿರಿಯ ನಾಗರಿಕರು ಇದ್ದರು.