ಹನುಮಸಾಗರ: ವಯಸ್ಸು ಹೆಚ್ಚಾಗುತ್ತಿದ್ದಂತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯವಶ್ಯಕ. ಹಿರಿಯ ನಾಗರಿಕರು ಆರೋಗ್ಯವಂತ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಆಯುಷ್ಯ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಅಸಂಕ್ರಾಮಿಕ ರೋಗಗಳು ಹೆಚ್ಚಾಗಿ ಜನರನ್ನು ಕಾಡುತ್ತಿದ್ದು, ವಿಶೇಷವಾಗಿ ವೃದ್ಧಾಪ್ಯದಲ್ಲಿ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಕಾಣಿಸುತ್ತಿವೆ. ಆದ್ದರಿಂದ ಹಿರಿಯ ನಾಗರಿಕರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.ಆರೋಗ್ಯವಂತ ಜೀವನಕ್ಕಾಗಿ ಪ್ರತಿನಿತ್ಯ ಯೋಗಾಸನ, ವ್ಯಾಯಾಮ, ಪ್ರಾಣಾಯಾಮ ರೂಢಿಸಿಕೊಳ್ಳಬೇಕು. ಆಹಾರ ಪದ್ಧತಿಯಲ್ಲಿ ಕೂಡ ಜಾಗೃತಿ ಅಗತ್ಯವಾಗಿದ್ದು, ಸಕ್ಕರೆ, ಮೈದಾ, ಬಿಳಿ ಉಪ್ಪು,ಪಾಲಿಷ್ ಮಾಡಿದ ಅಕ್ಕಿ ಹಾಗೂ ಕಾಯಿಸದೇ ಹಾಲು ಸೇವನೆ ಕಡಿಮೆ ಮಾಡಬೇಕು. ಕೊಬ್ಬಿನಾಂಶ ಇರುವ ಆಹಾರ ಸೇವನೆಯಿಂದ ರಕ್ತನಾಳಗಳಲ್ಲಿ ಬ್ಲಾಕ್ ಉಂಟಾಗಿ ಗಂಭೀರ ಕಾಯಿಲೆಗಳು ಬರಬಹುದೆಂದು ಎಚ್ಚರಿಸಿದರು.
ಗ್ರಾಪಂ ಪಿಡಿಓ ನಿಂಗಪ್ಪ ಮೂಲಿಮನಿ ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಸರ್ಕಾರದ ವಿವಿಧ ಯೋಜನೆ ಲಭ್ಯವಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ವೈದ್ಯರಾದ ಡಾ. ದೀಪಿಕಾ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳ ಅಧಿಕಾರಿಗಳಾದ ಸುಧಾಕರ, ಚನ್ನಬಸಪ್ಪ ಹನುಮನಾಳ, ಎ.ಎಸ್. ಅಂತರಂಗಿ, ಬೀರಪ್ಪ ವಡಗಲಿ, ಸಿದ್ಧಲಿಂಗರಡ್ಡಿ, ಗ್ರಂಥಪಾಲಕಿ ದುರಗಮ್ಮ ಹಿರೇಮನಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇತರರು ಇದ್ದರು.