ಧಾರವಾಡ: ಚುನಾವಣೆಗಳು ಪ್ರಜಾತಂತ್ರದ ಜೀವಾಳ. ಚುನಾವಣೆ, ಜನಪ್ರತಿನಿಧಿಗಳ ಆಯ್ಕೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೋಳ್ಳಲು ಮತದಾರರಲ್ಲಿ ಅವರ ಹಕ್ಕು ಮತ್ತು ಕರ್ತವ್ಯಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಹೇಳಿದರು.
ಚುನಾವಣೆಗಳ ಸಮಯದಲ್ಲಿ ಉಚಿತ ಉಡುಗೊರೆ, ಹಣ,ಸರಾಯಿ ಹಂಚಿಕೆ ಬಗ್ಗೆ ಎಚ್ಚರವಿದ್ದು, ಅವುಗಳನ್ನು ಮತದಾರರು ತಿರಸ್ಕರಿಸಬೇಕು. ಇಂತಹ ಆಮಿಷಗಳಿಗೆ ಮತದಾರರು ಬಲಿಯಾಗದೇ ಅವುಗಳನ್ನು ಹಂಚುವವರನ್ನು ವಿರೋಧಿಸಬೇಕು. ಎಲ್ಲ ಮತದಾರರು ಸ್ವಾಭಿಮಾನಿಗಳಾಗಿ ತಮ್ಮ ಮತದಾನದ ಹಕ್ಕು ತಪ್ಪದೇ ಚಲಾಯಿಸಬೇಕು ಎಂದು ನ್ಯಾಯಾಧೀಶ ಪಿ.ಎಫ್.ದೊಡ್ಡಮನಿ ತಿಳಿಸಿದರು.
ಊರಿನ ಅಭಿವೃದ್ಧಿ, ಜನಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ, ಎಲ್ಲ ಮತದಾರರು ಮತ ಚಲಾಯಿಸಬೇಕು ಮತ್ತು ಮತದಾನದ ಪ್ರಮಾಣ ಹೆಚ್ಚಳವಾಗಬೇಕು ಎಂದು ತಿಳಿಸಿದರು. ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸ್ವಾಗತಿಸಿದರು. ಧಾರವಾಡ ತಹಸೀಲ್ದಾರ್ ದೊಡ್ಡಪ್ಪ ಹೂಗಾರ ವಂದಿಸಿದರು. ನಿವೃತ್ತ ಮುಖ್ಯೋಪಾದ್ಯ ಕೆ.ಎಂ. ಶೇಖ ನಿರೂಪಿಸಿದರು.ಜಿಲ್ಲಾ ಚುನಾವಣಾ ರಾಯಬಾರಿ, ಪದ್ಮಶ್ರೀ ಪುರಸ್ಕೃತ ಪಂಡಿತ ವೇಂಕಟೇಶಕುಮಾರ, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಎ.ಚನ್ನಪ್ಪ ಮಾತನಾಡಿದರು. ಮನಗುಂಡಿ ಗ್ರಾಮದ ಶತಾಯುಷಿ ಮತದಾರ ಬಸವಣ್ಣೆವ್ವ ಹುಂಬೇರಿ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ನವ ಮತದಾರರಿಗೆ ವಿತರಿಸುವ ಮತದಾರ ಚೀಟಿಗಳನ್ನು ಸಾಂಕೇತಿಕವಾಗಿ ಪದವಿ ಕಾಲೇಜು ವಿದ್ಯಾರ್ಥಿ ಭುವನ ಜಗದೀಶ ಅಂಗಡಿ ಮತ್ತು ಇಂಜನೀಯರಿಂಗ್ ವಿದ್ಯಾರ್ಥಿನಿ ಸೋನಲ್ ದಯಾನಂದ ಉಗರಗೋಳ ಅವರಿಗೆ ಶತಾಯುಷಿ ಮತದಾರರಾದ ಬಸವಣ್ಣವ್ವ ಹುಂಬೇರಿ ಅವರು ವಿತರಿಸುವ ಮೂಲಕ ಉಚಿತ ಎಪಿಕ್ ಕಾರ್ಡ್ ವಿತರಣೆಗೆ ಚಾಲನೆ ನೀಡಿದರು.