ಹಿರಿಯ ವೈದ್ಯ ಡಾ. ವಿ. ಪಿ. ಸಂಕನೂರ ನಿಧನ

KannadaprabhaNewsNetwork | Published : Jun 15, 2024 1:04 AM

ಸಾರಾಂಶ

ನರೇಗಲ್ಲ ಸಮೀಪದ ನಿಡಗುಂದಿ ಗ್ರಾಮದ ಖ್ಯಾತ ಆಯುರ್ವೇದ ವೈದ್ಯ, ಕೃಷಿ ತಜ್ಞ, ಶ್ರಮ ಜೀವಿ ಡಾ. ವಿ.ಪಿ. ಸಂಕನೂರ (99) ಗುರುವಾರ ರಾತ್ರಿ 11.30ಕ್ಕೆ ಗದಗನಲ್ಲಿ ನಿಧನರಾದರು.

ಕನ್ನಡಪ್ರಭ ವಾರ್ತೆ ನರೇಗಲ್ಲ

ಇಲ್ಲಿಗೆ ಸಮೀಪದ ನಿಡಗುಂದಿ ಗ್ರಾಮದ ಖ್ಯಾತ ಆಯುರ್ವೇದ ವೈದ್ಯ, ಕೃಷಿ ತಜ್ಞ, ಶ್ರಮ ಜೀವಿ ಡಾ. ವಿ.ಪಿ. ಸಂಕನೂರ (99) ಗುರುವಾರ ರಾತ್ರಿ 11.30ಕ್ಕೆ ಗದಗನಲ್ಲಿ ನಿಧನರಾದರು.

ಮೃತರಿಗೆ ವಿಧಾನ ಪರಿಷತ್‌ ಸದಸ್ಯ ಪ್ರೊ. ಎಸ್‌.ವಿ. ಸಂಕನೂರ ಸೇರಿದಂತೆ ಐವರು ಗಂಡು ಮಕ್ಕಳು, ಐವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಗಳಿದ್ದಾರೆ. ಶುಕ್ರವಾರ ಸಂಜೆ ಅಂತ್ಯಕ್ರಿಯೆ ಜರುಗಿತು.

ನರೇಗಲ್ಲ ಭಾಗದಲ್ಲಿ ಡಾ. ವಿ.ಪಿ. ಎಂದೇ ಪ್ರಸಿದ್ಧರಾಗಿದ್ದ ಡಾ. ವಿ.ಪಿ. ಸಂಕನೂರ ಅಂದಿನ ಕಾಲದಲ್ಲಿ ಸೈಕಲ್ ಮೇಲೆಯೆ ಗ್ರಾಮಗಳಿಗೆ ಹೋಗಿ ರೋಗಿಗಳ ಸೇವೆ ಮಾಡಿ ಬಂದವರು.

ಡಾ. ವಿ.ಪಿ. ಸಂಕನೂರ ಅವರು ತಮ್ಮ ಸ್ವಗ್ರಾಮ ನಿಡಗುಂದಿಯಲ್ಲಿ ಸರ್ಕಾರಿ ಪಿಯು ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ತಮ್ಮ ಬೆಲೆ ಬಾಳುವ 3 ಎಕರೆ ಜಮೀನನ್ನು ದಾನವಾಗಿ ನೀಡುವ ಮೂಲಕ ಶಿಕ್ಷಣಪ್ರೇಮಿಯಾಗಿ ಗುರುತಿಸಿಕೊಂಡಿದ್ದಾರೆ.

ನಿಡಗುಂದಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಪ್ರಧಾನ ಕಾರ್ಯದರ್ಶಿಯಾಗಿ, ನರೇಗಲ್ಲದ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಸದಸ್ಯರಾಗಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ.

ನಿಧನದ ವಾರ್ತೆ ತಿಳಿಯುತ್ತಿದ್ದಂತೆ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಗದಗನ ತೋಂಟದಾರ್ಯ ಮಠದ ಡಾ. ಸಿದ್ದರಾಮ ಶ್ರೀಗಳು, ಬೈರನಹಟ್ಟಿಯ ಶ್ರೀ ಶಾಂತಲಿಂಗ ಸ್ವಾಮೀಜಿ, ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು, ನಿಡಗುಂದಿ ಧರ್ಮರ ಮಠದ ಶ್ರೀಗಳು ಇನ್ನೂ ಮುಂತಾದವರು ನಿಡಗುಂದಿ ಗ್ರಾಮಕ್ಕೆ ಆಗಮಿಸಿ ಸಾಂತ್ವನ ಹೇಳಿದರು.

ಸಂತಾಪ:

ಡಾ. ಸಂಕನೂರ ಅವರ ನಿಧನಕ್ಕೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ, ಹುಬ್ಬಳ್ಳಿ ಶಾಸಕ ಮಹೇಶ ಟೆಂಗಿನಕಾಯಿ, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್, ಪಾಟೀಲ, ನರಗುಂದ ಶಾಸಕ, ಮಾಜಿ ಸಚಿವ ಸಿ. ಸಿ. ಪಾಟೀಲ, ರೋಣ ಮಾಜಿ ಶಾಸಕ, ಮಾಜಿ ಸಚಿವ ಕೆ. ಜಿ. ಬಂಡಿ, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಎಂ. ಎಸ್. ಕರಿಗೌಡರ, ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ಕಾಂತಿಲಾಲ ಬನ್ಸಾಲಿ, ಸಂಗಮೇಶ ದುಂದೂರ, ಶ್ರೀಪತಿ ಉಡುಪಿ, ಪ್ರಕಾಶ ಅಂಗಡಿ, ಗದಗನ ಚಿರಾಯು ಆಸ್ಪತ್ರೆಯ ವೈದ್ಯರ ತಂಡ, ಡಾ. ಸಂಕನೂರ ಆಸ್ಪತ್ರೆಯ ವೈದ್ಯರ ತಂಡ, ಡಾ. ಕುಶಾಲ ಗೋಡಖಿಂಡಿ ಹಾಗೂ ಸಂಕನೂರ ಅಭಿಮಾನಿ ಬಳಗದ ಸದಸ್ಯರು, ಬಿಜೆಪಿ ಕಾರ್ಯಕರ್ತರು ಇನ್ನೂ ಮುಂತಾದವರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಶುಕ್ರವಾರ ಸ್ವಗ್ರಾಮ ನಿಡಗುಂದಿಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸಹಸ್ರಾರು ಜನ ಪಾಲ್ಗೊಂಡಿದ್ದರು.

Share this article