ಕನ್ನಡಪ್ರಭ ವಾರ್ತೆ ಬೆಂಗಳೂರು
ನಿರ್ಮೋಹಿಯಾಗಿದ್ದ ಹಿರಿಯ ಪತ್ರಕರ್ತ ಪಾ.ವೆಂ.ಆಚಾರ್ಯ ಅವರು, ಸಮಾಜದ ಋಣದಲ್ಲಿದ್ದು ಸಮಾಜಕ್ಕೆ ನಮ್ಮ ಕೈಲಾದ ಸೇವೆ ಸಲ್ಲಿಸಬೇಕು ಎಂಬ ಉದಾತ್ತ ಮನೋಭಾವ ಹೊಂದಿದ್ದರು ಎಂದು ಕವಿ, ಜಯಂತ ಕಾಯ್ಕಿಣಿ ಸ್ಮರಿಸಿದರು.ಶಿವರಾಮ ಕಾರಂತ ವೇದಿಕೆ, ಪಾ.ವೆಂ.ಆಚಾರ್ಯ ಟ್ರಸ್ಟ್ ಮತ್ತು ವಿನಾಯಕ ದೇವಸ್ಥಾನ ಸಮಿತಿಯಿಂದ ಆರ್.ಟಿ.ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಪಾ.ವೆಂ.ಸ್ಮೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುತ್ರ ಮರಣ ಹೊಂದಿದಾಗಲೂ ಪಾವೆಂ ಅವರು ಕಣ್ಣೀರು ಹಾಕಿರಲಿಲ್ಲ. ಆದರೆ ಮಹಾತ್ಮಾ ಗಾಂಧೀಜಿಯವರ ಹತ್ಯೆಯಾದ ದಿನ ಬಹಳ ದುಃಖದಲ್ಲಿದ್ದು, ಊಟ ಮಾಡದೆ ಮಲಗಿದ್ದರು. ಕುಟುಂಬದ ಶ್ರೇಯೋಭಿವೃದ್ಧಿಗಿಂತಲೂ ಸಮಾಜದ ಹಿತಕ್ಕಾಗಿ ಪಾವೆಂ ಶ್ರಮಿಸಿದ್ದರು ಎಂದರು.
ಜ್ಞಾನ ಹಂಚಿದಷ್ಟೂ ಬೆಳಗುತ್ತದೆ:ಜ್ಞಾನ ಹಂಚಿದಷ್ಟೂ ಬೆಳಗುತ್ತದೆ. ಯಾವುದರ ಬಗ್ಗೆ ಅಹಂಕಾರ ಹೊಂದುತ್ತೇವೆಯೋ ಅದು ಜ್ಞಾನ ಆಗಲು ಸಾಧ್ಯವಿಲ್ಲ. ಇನ್ನೂ ತಿಳಿಯುವುದಿದೆ ಎಂದಾಗಲೇ ಹೊಸದನ್ನು ಕಲಿಯಬಹುದು. ಈಗ ಸಮಾಜದಲ್ಲಿ ಮತೀಯತೆ, ಮೌಢ್ಯ, ಅಹಂಕಾರ ತುಂಬಿದೆ. ಆದರೆ ಹಿಂದಿನ ಕಾಲದಲ್ಲಿ ಪ್ರಖ್ಯಾತ ವ್ಯಕ್ತಿಗಳು ತಮ್ಮ ಕಾರ್ಯದ ಬಗ್ಗೆ ಪೈಪೋಟಿ ಮನೋಭಾವ ತೋರದೆ ಪರಸ್ಪರ ಆರೋಗ್ಯಕರ ಚರ್ಚೆ ನಡೆಸುತ್ತಿದ್ದರು. ಪ್ರೀತಿಯಿಂದ ಬದುಕುತ್ತಿದ್ದರು ಎಂದು ಬಣ್ಣಿಸಿದರು.
ಪಾವೆಂ ಅವರು ಪಾ.ವೆಂ.ಆಚಾರ್ಯ, ಪಿವಿ, ಲಾಂಗೂಲಾಚಾರ್ಯ ಸೇರಿದಂತೆ ಹಲವು ಹೆಸರುಗಳಿಂದ ಬರೆಯುತ್ತಿದ್ದರು. ಕಸ್ತೂರಿ ಮಾಸಿಕಕ್ಕೆ ಹೊಸ ರೂಪ ನೀಡಿ ಮಾದರಿಯಾಗಿ ಜೀವನ ಸಾಗಿಸಿದರು. ಆದರೆ ಪ್ರಸಕ್ತ ಕಾಲಘಟ್ಟದಲ್ಲಿ ನಮ್ಮ ಜೀವನವನ್ನು ಹಾಳು ಮಾಡಿರುವುದೇ ಪರೀಕ್ಷೆ. ಎಕ್ಸಾಂ ಫೋಬಿಯಾದಲ್ಲಿ ನಾವು ಹಾಳಾಗಿದ್ದಲ್ಲದೇ ನಮ್ಮ ಮಕ್ಕಳನ್ನೂ ಹಾಳು ಮಾಡುತ್ತಿದ್ದೇವೆ ಎಂದು ವಿಷಾದಿಸಿದರು.ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಡಾ.ಎಚ್.ಶಶಿಕಲಾ ಮಾತನಾಡಿ, ಪಾವೆಂ ಅವರು ಕಸ್ತೂರಿ ಪತ್ರಿಕೆ ಪ್ರವೇಶಿಸಿದ ಆರು ತಿಂಗಳಲ್ಲೇ ಸರ್ವ ಜನಾಂಗದ ಓದುಗರನ್ನೂ ಹಿಡಿದಿಟ್ಟುಕೊಂಡರು. ಜನರಿಗೆ ತಿಳಿಯದ ವಿಷಯಗಳು ಹಾಗೂ ವಿಭಿನ್ನವಾದ ಕೌತುಕ ಲೋಕವನ್ನು ಆಕರ್ಷಣೀಯವಾಗಿ ಪ್ರಸ್ತುತಪಡಿಸುತ್ತಿದ್ದರು. ಸಂಭಾಷಣೆ ಶೈಲಿಯಲ್ಲಿ ಅವರ ಬರವಣಿಗೆ ಇರುತ್ತಿತ್ತು ಎಂದು ನೆನಪಿಸಿಕೊಂಡರು.
ಶಿವರಾಮ ಕಾರಂತ ವೇದಿಕೆ ಅಧ್ಯಕ್ಷೆ ದೀಪಾ ಫಡ್ಕೆ, ಪಾ.ವೆಂ.ಆಚಾರ್ಯ ಟ್ರಸ್ಟ್ ಕಾರ್ಯದರ್ಶಿ ಛಾಯಾ ಕೆ.ಉಪಾಧ್ಯ ಹಾಜರಿದ್ದರು.