ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ನಿಧನರಾದ ಖ್ಯಾತ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ಮತ್ತು ಹಿರಿಯ ಪತ್ರಕರ್ತ ಅ.ಚ. ಶಿವಣ್ಣ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.ನಗರದಲ್ಲಿರುವ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅಗಲಿದ ಪತ್ರಕರ್ತರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಅವರ ಕಾರ್ಯವೈಖರಿ ಮತ್ತು ಪತ್ರಿಕೋದ್ಯಮದಲ್ಲಿನ ಸೇವೆಯನ್ನು ಹಿರಿಯ ಪತ್ರಕರ್ತರು ಸ್ಮರಿಸಿದರು.
‘ಕನ್ನಡಪ್ರಭ’ದ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ಜಾರ್ಜ್ ಅವರ ಬರಹಗಳಲ್ಲಿ ಚಿಂತನೆ ಮತ್ತು ಒಳನೋಟವಿತ್ತು. ಅವರು ಬರೆದ ಪುಸ್ತಕಗಳಲ್ಲಿ ಆಳವಾದ ಚಿಂತನೆ, ಒಳನೋಟ ಸ್ಪಷ್ಟವಾಗಿ ಕಾಣುತ್ತಿತ್ತು. ಸಿಂಗಾಪುರ ಅಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ ಸಿಂಗಾಪುರದ ಮಾಜಿ ಪ್ರಧಾನಿ ಲೀ ಕ್ವಾನ್ ಯೀವ್ ಅವರ ಕುರಿತಾಗಿ ಪುಸ್ತಕ ಬರೆದಿದ್ದರು. ಸಿಂಗಾಪುರ ಆ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಿದ್ದು ಹೇಗೆ? ಅಭಿವೃದ್ಧಿಯ ವಿವಿಧ ಹಂತಗಳು, ಸರ್ಕಾರದ ಹಂತದಲ್ಲಿ ಕೈಗೊಂಡ ನಿರ್ಧಾರಗಳು ಮತ್ತು ತಂತ್ರಗಳನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದರು.ಆದರೆ, ಆ ಪುಸ್ತಕವನ್ನು ಸಿಂಗಾಪುರ ಸರ್ಕಾರ ನಿಷೇಧಿಸಿತ್ತು. ಅಲ್ಲದೇ, ಅವರ ಬಂಧನಕ್ಕೆ ಆದೇಶ ಹೊರಡಿಸಿದ್ದ ಕಾರಣ ಜಾರ್ಜ್ ಅವರು ಸಿಂಗಾಪುರಕ್ಕೆ ಹೋಗಲು ಆಗಲೇ ಇಲ್ಲ. ಅಂತಹ ನಿಷ್ಠುರ, ಆಳವಾದ ಚಿಂತನೆಯ ಪತ್ರಕರ್ತ ಅವರಾಗಿದ್ದರು ಎಂದು ರವಿ ಹೆಗಡೆ ಸ್ಮರಿಸಿದರು.
ಭಾರತರತ್ನ ಪುರಸ್ಕೃತ ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮೀ ಅವರ ಜೀವನ ಚರಿತ್ರೆಯ ಪುಸ್ತಕದಲ್ಲಿ ಅವರ ವ್ಯಕ್ತಿತ್ವವನ್ನು ದಾಖಲಿಸಿದ್ದಾರೆ. ಅವರ ಏಳಿಗೆಯಲ್ಲಿ ಪತಿ ಸದಾಶಿವಂ ಅವರ ಪಾತ್ರ, ಶಕ್ತಿಯಾಗಿ ನಿಂತ ಬಗೆಯನ್ನು ವಿವರಿಸಿದ್ದರು. ಸುಬ್ಬಲಕ್ಷ್ಮೀ ಅವರು ನಟಿಯಾಗಿ ಸಿನಿಮಾ ರಂಗ ಪ್ರವೇಶಿಸಬಹುದಿತ್ತು. ಆದರೆ, ಗಾಯಕಿಯಾಗಿ ಉಳಿದಿರುವುದರ ಹಿಂದಿನ ಒಳನೋಟಗಳನ್ನು ದಾಖಲಿಸಿದ್ದಾರೆ ಎಂದು ರವಿ ಹೆಗಡೆ ತಿಳಿಸಿದರು.ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮಾತನಾಡಿ, ಅ.ಚ. ಶಿವಣ್ಣ ಅವರಿಗೆ ಪತ್ರಕರ್ತರಿಗೆ ಇರಬೇಕಾದ ಗತ್ತು ಇತ್ತು. ಅವರು ಮಂತ್ರಿಗಳನ್ನು ಸರ್, ಸಾಹೇಬ ಎಂದು ಸಂಬೋಧಿಸುತ್ತಿರಲಿಲ್ಲ. ಕಿರಿಯ ಪತ್ರಕರ್ತರಿಗೂ ಅದೇ ರೀತಿ ಮಾರ್ಗದರ್ಶನ ಮಾಡುತ್ತಿದ್ದರು. ಮಂತ್ರಿ ಆದವರನ್ನು ಮಂತ್ರಿ ಎಂದು ಕರೆದರೆ ಸಾಕು. ಮಂತ್ರಿ ಎನ್ನುವುದು ಕೂಡ ಗೌರವ ಸೂಚಕ. ಸಾರ್ವಜನಿಕ ನಡವಳಿಕೆ ಹೇಗೆ ಇರಬೇಕು ಎಂಬುದಕ್ಕೆ ಶಿವಣ್ಣ ಮಾದರಿಯಾಗಿದ್ದರು ಎಂದರು.
ಹಿರಿಯ ಪತ್ರಕರ್ತ ಮಹದೇವಪ್ಪ ಮಾತನಾಡಿ, ಈ ಇಬ್ಬರೂ ನಿಷ್ಠುರತೆ, ರಾಜಿಯಾಗದೆ ಕೆಲಸ ನಿರ್ವಹಿಸುವ ಮೂಲಕ ಯುವ ಪತ್ರಕರ್ತರಿಗೆ ಮಾದರಿಯಾಗಿದ್ದರು ಎಂದು ಹೇಳಿದರು.ಕನ್ನಡಪ್ರಭ ಸಮನ್ವಯ ಮತ್ತು ವಿಶೇಷ ಯೋಜನೆ ಸಂಪಾದಕ ಬಿ.ವಿ. ಮಲ್ಲಿಕಾರ್ಜುನಯ್ಯ, ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತಿತರರು ಉಪಸ್ಥಿತರಿದ್ದರು.