ಕಾಡುಗೊಲ್ಲರ ಹಟ್ಟಿಗೆ ಹಿರಿಯ ಅಧಿಕಾರಿಗಳ ಭೇಟಿ

KannadaprabhaNewsNetwork | Published : Apr 30, 2025 12:39 AM

ಸಾರಾಂಶ

ಅನೇಕ ವರ್ಷಗಳಿಂದ ತಾವು ವಾಸಿಸುವ ಜಾಗದ ಕುರಿತು ಅಧಿಕಾರಿಗಳಿಂದ ಸರ್ವೆ ವರದಿ ಪಡೆದು ಕೂಡಲೇ ಮನೆಗಳ ಹಕ್ಕುಪತ್ರ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವುದಾಗಿ ಕಾಡುಗೊಲ್ಲರಹಟ್ಟಿಯ ನಿವಾಸಿಗಳಿಗೆ ತಹಸೀಲ್ದಾರ್‌ ಡಿ.ಎನ್‌. ವರದರಾಜು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಅನೇಕ ವರ್ಷಗಳಿಂದ ತಾವು ವಾಸಿಸುವ ಜಾಗದ ಕುರಿತು ಅಧಿಕಾರಿಗಳಿಂದ ಸರ್ವೆ ವರದಿ ಪಡೆದು ಕೂಡಲೇ ಮನೆಗಳ ಹಕ್ಕುಪತ್ರ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವುದಾಗಿ ಕಾಡುಗೊಲ್ಲರಹಟ್ಟಿಯ ನಿವಾಸಿಗಳಿಗೆ ತಹಸೀಲ್ದಾರ್‌ ಡಿ.ಎನ್‌. ವರದರಾಜು ಭರವಸೆ ನೀಡಿದರು.

ಪಾವಗಡ ತಾಲೂಕು ನಿಡಗಲ್‌ ಹೋಬಳಿಯ ಕೆ.ಟಿ.ಹಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಟ್ಟ ಮುಗದಾಳಬೆಟ್ಟ ಕಾಡು ಗೊಲ್ಲರಹಟ್ಟಿಯ ಮೂಲಭೂತ ಸಮಸ್ಯೆ ಕುರಿತು ಏ.28ರಂದು ಪ್ರತ್ರಿಕೆಗಳಲ್ಲಿ ವರದಿಯಾಗುತ್ತಿದ್ದಂತೆ ತಹಸೀಲ್ದಾರ್‌ ವರದರಾಜು, ತಾಪಂ ಇಒ ಜಾನಕಿರಾಮ್‌, ಕಂದಾಯ ಇಲಾಖೆಯ ನಿರೀಕ್ಷಕ ರಾಮಲಿಂಗಪ್ಪ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ್‌ ಇತರೆ ಅಧಿಕಾರಿಗಳು ಮುಗದಾಳಬೆಟ್ಟ ಗೊಲ್ಲರಹಟ್ಟಿಗೆ ಭೇಟಿ ಪರಿಶೀಲನೆ ನಡೆಸಿದರು.

ಈ ವೇಳೆ ತಹಸೀಲ್ದಾರ್ ಅವರಿಗೆ ಪ್ರಶ್ನೆಗಳ ಸುರಿಮಳೆಗೈದ ಮಹಿಳೆಯರು ಶೌಚಗೃಹಗಳಿಲ್ಲದೇ ರೈತರ ಜಮೀನುಗಳಿಗೆ ತೆರಳಿ ಬಯಲು ಬಹಿರ್ದೆಸೆಗೆ ಹೋಗಬೇಕು. ಸ್ನಾನದ ಗೃಹ ಕಟ್ಟಿಕೊಟ್ಟಲು ಇಲ್ಲಿನ ಪಕ್ಕದ ಜಮೀನು ಮಾಲೀಕ ಅಡ್ಡಿಪಡಿಸುವ ಕಾರಣ ಬಟ್ಟೆ ಸುತ್ತಿದ ಪರದೆಯೊಳಗೆ ಸ್ನಾನ ಮಾಡುವ ಸ್ಥಿತಿ ಇದೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪಹಣಿಯಲ್ಲಿ ಗೊಲ್ಲರಹಟ್ಟಿ ಅನುಭವ ಎಂದು ನಮೂದಾಗಿದ್ದರೂ ಮನೆಗಳ ಹಕ್ಕು ಪತ್ರ ವಿತರಣೆಯಲ್ಲಿ ಕಂದಾಯ ಇಲಾಖೆ ಅಧಿಕಾರಿ ಹಾಗೂ ಖಾತೆ ಮಾಡಿಕೊಡುವಲ್ಲಿ ತಾಪಂ ಇಒ ಹಾಗೂ ಕೆ.ಟಿ.ಹಳ್ಳಿ ಗ್ರಾಪಂ ಪಿಡಿಒ ನಿರ್ಲಕ್ಷ್ಯವಹಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅನೇಕ ಮಂದಿ ಮಹಿಳೆಯರು ತಹಸೀಲ್ದಾರ್‌ಗೆ ಪ್ರಶ್ನಿಸಿದರು. ಅಂಗನವಾಡಿ ಕೇಂದ್ರದ ಕಟ್ಟಡ ಅರ್ಧಕ್ಕೆ ನಿಂತಿದೆ. ಅಂಗನವಾಡಿ ಕೇಂದ್ರವಿಲ್ಲದೇ ಇಲ್ಲಿಂದ ಎರಡು ಕಿಮೀ ದೂರದ ಸೆಂಟರ್‌ಗೆ ಮಕ್ಕಳನ್ನು ಕಳುಹಿಸಬೇಕು. ಊರೊಳಗೆ ಚರಂಡಿ ವ್ಯವಸ್ಥೆಯಿಲ್ಲ, ವಿದ್ಯುತ್‌ ಬೆಳಕಿಲ್ಲ ಕುರಿಮೇಕೆ ಸಾಕಾಣಿಕೆಯಿಂದ ಜೀವನ ಸಾಗಿಸುತ್ತಿದ್ದು ಪ್ರಾಥಮಿಕ ಶಾಲೆ ಕಲ್ಪಿಸಿದ ಕಾರಣ ತಮ್ಮ ಮಕ್ಕಳನ್ನು ಬೇರೆ ಕಡೆ ಶಾಲೆಗಳಿಗೆ ಸೇರಿಸಿ ವ್ಯಾಸಂಗ ಮಾಡಿಸುತ್ತಿದ್ದೇವೆ ಎಂದರು.

ಸಮಸ್ಯೆ ಅಲಿಸಿದ ಬಳಿಕ ತಹಸೀಲ್ದಾರ್‌ ಮಾತನಾಡಿ ಮುಗದಾಳಬೆಟ್ಟ ಗ್ರಾಮದ ಕಾಡು ಗೊಲ್ಲರಹಟ್ಟಿಯ ಸಮಸ್ಯೆ ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ವಾಸದ ಜಾಗದ ಕುರಿತು ಶೀಘ್ರ ರೆವಿನ್ಯೂ ಇಲಾಖೆಯಿಂದ ಸರ್ವೆ ಕಾರ್ಯ ನಡೆಸಿ ಇನ್ನೂ ವಾರದೊಳಗೆ ಹಕ್ಕುಪತ್ರಗಳ ವಿತರಣೆಗೆ ಕ್ರಮ ಕೈಗೊಳ್ಳಲಿದ್ದೇವೆ. ಚರಂಡಿ ವ್ಯವಸ್ಥೆ ಅಂಗನವಾಡಿ ಕೇಂದ್ರ ಕಟ್ಟಡದ ಪ್ರಗತಿ ಹಾಗೂ ಶೌಚಾಲಯ ಮತ್ತು ಸ್ನಾನದ ಗೃಹಗಳ ನಿರ್ಮಾಣಕ್ಕೆ ಗ್ರಾಪಂಗೆ ಸೂಚಿಸಲಿದ್ದು ಶೀಘ್ರದಲ್ಲಿಯೆ ಗೊಲ್ಲರಹಟ್ಟಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಭರವಸೆ ವ್ಯಕ್ತಪಿಡಿಸಿದರು.

ತಾಪಂ ಇಒ ಜಾನಕಿರಾಮ್‌ ಮಾತನಾಡಿ ಇಲ್ಲಿನ ಜ್ವಲಂತ ಸಮಸ್ಯೆ ಕುರಿತು ಶಾಸಕ ಹಾಗೂ ಜಿಲ್ಲಾಧಿಕಾರಿ ಹಾಗೂ ಜಿಪಂಗೆ ವರದಿ ಸಲ್ಲಿಸುವ ಮೂಲಕ ಶೀಘ್ರದಲ್ಲಿಯೇ ಮನೆಗಳ ಖಾತೆ ಹಾಗೂ ಕುಡಿಯುವ ನೀರು ಹಾಗೂ ಜೆಜೆಎಂ ಪೈಪ್‌ ಲೈನ್‌ ಕಾಮಗಾರಿ ಇತರೆ ಮೂಲಭೂತ ಸೌಲಭ್ಯ ಕಲ್ಪಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ವ್ಯಕಪಡಿಸಿದರು.

Share this article