ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎಂಎಂಕೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯ ವತಿಯಿಂದ ಕಾಲೇಜು ವಾರ್ಷಿಕೋತ್ಸವ ಸಮಾರಂಭದದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವೆ ವಿ.ಆರ್. ಶೈಲಜಾ ಅವರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮೈಸೂರಿನ ಮಹಿಳಾ ಶಿಕ್ಷಣಕ್ಕೆ ಎಸ್.ಡಿಎಂ ಮಹಿಳಾ ಕಾಲೇಜು ಮಹಿಳಾ ಸಬಲೀಕರಣದ ಆಶೋತ್ತರವನ್ನು ಈಡೇರಿಸುತ್ತಾ ವಿದ್ಯಾರ್ಥಿನಿಯರ ಸರ್ವತೋಮುಖ ಶಿಕ್ಷಣದ ಕನಸಿಗೆ ಸಾಕಾರವಾಗಿದೆ, ಈ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದು ವಿಶ್ವವಿದ್ಯಾನಿಲದಿಂದ ಎರಡನೇ ರ್ಯಾಂಕ್ ಪಡೆದು ಮೂರು ಚಿನ್ನದ ಪದಕದೊಂದಿಗೆ ಎಂ.ಎಸ್ಸಿ ಪದವಿ ಪಡೆಯಲು ಸಾಧ್ಯವಾಯಿತು,ಇದೇ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿಯನ್ನು ಆರಂಭಿಸಿದ್ದು, ನನ್ನ ಬದುಕಿನ ಅವಿಸ್ಮರಣೀಯ ನೆನಪಾಗಿದೆ. ತದನಂತರದಲ್ಲಿ ಕೇಂದ್ರ ಸರ್ಕಾರದ ಫೆಲೋಶಿಪ್ ಪಡೆದು ವಿಜ್ಙಾನ ಸಂಶೋಧನೆಯಲ್ಲಿ ಕಾರ್ಯ ನಿರ್ವಹಿಸುವ ಸದಾವಕಾಶ ದೊರೆಯಿತು, ರಾಜ್ಯದ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ನಾನು ಓದಿರುವ ಈ ಕಾಲೇಜಿಗೆ 70 ಸಾವಿರ ರು. ಗಳ ದೇಣಿಗೆಯನ್ನು ಹಿರಿಯ ವಿದ್ಯಾರ್ಥಿನಿಯರ ಸಂಘ ರತ್ನಮಾನಸ ಸಂಘಕ್ಕೆ ಅಭಿಮಾನದಿಂದ ನೀಡುತ್ತಿರುವುದಾಗಿ ಅವರು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಾಯಿನಾಥ್ ಮಲ್ಲಿಗೆ ಮಾಡು ಅವರು, ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಸಶಕ್ತ ಮಹಿಳಾ ಸಬಲೀಕರಣ ಎಂಬ ಧ್ಯೇಯದೊಂದಿಗೆ ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿರುವ ನಮ್ಮ ಸಂಸ್ಥೆಯ 1990 ರಿಂದ ಸಮಾಜಕ್ಕೆ ಅತ್ಯುತ್ತಮ ಸಾಧಕ ಮಹಿಳಾ ವಿದ್ಯಾರ್ಥಿನಿಯರನ್ನು ಕೊಡುಗೆಯಾಗಿ ನೀಡುತ್ತಿದೆ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ನಯನ ಕುಮಾರಿ, ಉಪ ಪ್ರಾಂಶುಪಾಲೆ ಪ್ರೊ.ಎನ್. ಭಾರತಿ, ಐಕ್ಯುಎಸಿ ಸಂಚಾಲಕರಾದ ಪ್ರೊ.ಕೆ.ಎಸ್. ಸುಕೃತ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ. ಜ್ಯೋತಿ ಲಕ್ಷ್ಮಿ, ಕಾವಾ ರತ್ನ ಮಾನಸ ಹಿರಿಯ ವಿದ್ಯಾರ್ಥಿನಿ ಸಂಘದ ಸಂಚಾಲಕರಾದ ಚೈತ್ರಾ ಇದ್ದರು.