ಬರಗಾಲದಲ್ಲಿ ನೆರವಿಗೆ ಬಂದ ನರೇಗಾ ಕಾಮಗಾರಿ

KannadaprabhaNewsNetwork |  
Published : May 30, 2024, 12:49 AM IST
ಫೋಟೋ : ೨೯ಎಚ್‌ಎನ್‌ಎಲ್೬ | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನಲ್ಲಿ ಪ್ರತಿ ನಿತ್ಯ 7ರಿಂದ 8 ಸಾವಿರ ಜನ ನರೇಗಾ ಯೋಜನೆಯಡಿ ದುಡಿಯುತ್ತಿದ್ದು, ಬರಗಾಲದ ಸಮಯದಲ್ಲಿ ಈ ಯೋಜನೆ ಕೂಲಿ ಕಾರ್ಮಿಕರ ನೆರವಿಗೆ ಬಂದಿದೆ.

ಮಾರುತಿ ಶಿಡ್ಲಾಪುರ

ಹಾನಗಲ್ಲ: ತಾಲೂಕಿನಲ್ಲಿ ಬರಗಾಲದ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಿಂದ ಹೆಚ್ಚು ಅನುಕೂಲವಾಗಿದೆ.

ಕಾರ್ಮಿಕರು ಗುಳೆ ಹೋಗುವುದು ಕಡಿಮೆಯಾಗಿದೆ. ಬರಗಾಲದಲ್ಲಿಯೂ ಕೃಷಿ ಕಾರ್ಮಿಕರಿಗೆ ತಮ್ಮ ಊರಿನಲ್ಲಿಯೇ ಕೆಲಸ ಮಾಡಲು ಅವಕಾಶವಾಗಿದೆ. ಹಾನಗಲ್ಲ ತಾಲೂಕಿನಲ್ಲಿ ಪ್ರತಿ ನಿತ್ಯ 7ರಿಂದ 8 ಸಾವಿರ ಜನ ಈ ಯೋಜನೆಯಲ್ಲಿ ದುಡಿಯುತ್ತಿದ್ದಾರೆ.

ರಾಜ್ಯದಲ್ಲಿಯೇ ಅತಿ ದೊಡ್ಡ ತಾಲೂಕು ಎಂಬ ಹೆಗ್ಗಳಿಕೆ ಹೊಂದಿರುವ ಹಾನಗಲ್ಲಿನಲ್ಲಿ 900 ಕೆರೆಗಳಿವೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ 6316 ಕುಟುಂಬಗಳ 11,519 ಕಾರ್ಮಿಕರು ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಯೋಜನಾ ವರ್ಷದಲ್ಲಿ ₹23.38 ಕೋಟಿ ಕೂಲಿ ಮೊತ್ತ ನರೇಗಾ ಅಡಿಯಲ್ಲಿ ನೀಡಲಾಗಿದೆ.42 ಗ್ರಾಪಂಗಳ ವ್ಯಾಪ್ತಿಯಲ್ಲಿ ಎಲ್ಲ ಊರುಗಳಲ್ಲಿ ಕಾರ್ಮಿಕರು ನರೇಗಾ ಯೋಜನೆಯಡಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಆದರೆ ಹಾನಗಲ್ಲ ಹಳೆಕೋಟಿ ವ್ಯಾಪ್ತಿಯಲ್ಲಿನ ಕೆರೆಗಳ ಹೂಳೆತ್ತಲು ಅವಕಾಶವಾಗಿಲ್ಲ. ಗ್ರಾಪಂ ವ್ಯಾಪ್ತಿಯ 700 ಕೆರೆಗಳು, ಸಣ್ಣ ನೀರಾವರಿ ಇಲಾಖೆಯ 200 ಕೆರೆಗಳು ಕಾಮಗಾರಿ ವ್ಯಾಪ್ತಿಗೆ ಒಳಪಟ್ಟಿವೆ. ಆದರೆ ನೂರಾರು ಎಕರೆ ವಿಸ್ತೀರ್ಣ ಹೊಂದಿದ ಅಕ್ಕಿಆಲೂರು, ಬೆಳವತ್ತಿ, ನರೇಗಲ್ಲ, ಬೆಳಗಾಲಪೇಟೆ ಮುಂತಾದ ಕಡೆಗೆ ಇರುವ ಕೆರೆಗಳನ್ನು ಈ ನರೇಗಾ ಯೋಜನೆಯಡಿ ಸೇರ್ಪಡೆ ಮಾಡಲು ಆಗುತ್ತಿಲ್ಲ. ಕೆರೆಯ ವಿಸ್ತೀರ್ಣ ಬಹು ದೊಡ್ಡದಾಗಿರುವುದರಿಂದ ಮಣ್ಣು ಹೊತ್ತು ಹೊರಗೆ ಹಾಕಲು ಆಗದು. ಅಲ್ಲದೆ ದೊಡ್ಡ ಪ್ರಮಾಣದ ಕಾರ್ಮಿಕರ ಲಭ್ಯತೆಯೂ ಇಲ್ಲ. ಯಂತ್ರಗಳ ಮೂಲಕವೇ ಇಂತಹ ಕೆರೆ ಕಾಮಗಾರಿ ನಡೆಸಲು ಸಾಧ್ಯ ಎನ್ನಲಾಗಿದೆ.

ಕಳೆದ ವರ್ಷ 19,717ಕುಟುಂಬಗಳ 39 ಸಾವಿರ ಕಾರ್ಮಿಕರು ಈ ಯೋಜನೆಯಡಿ ಕೆಲಸ ಮಾಡಿದ್ದರು. 7.57 ಲಕ್ಷ ಮಾನವ ದಿನಗಳ ಸೃಜನೆಯಾಗಿತ್ತು. ₹23.58 ಕೋಟಿ ಮೊತ್ತವನ್ನು ಕಾರ್ಮಿಕರಿಗೆ ನೀಡಲಾಗಿತ್ತು. ಪ್ರಸ್ತುತ ವರ್ಷ 9 ಲಕ್ಷ ಮಾನವ ದಿನಗಳ ಸೃಜನೆಗೆ ಇಲಾಖೆ ಗುರಿ ಇಟ್ಟಿಕೊಂಡಿದೆ.

ಕೂಸಿನ ಮನೆ: ನರೇಗಾದಲ್ಲಿ ಕೆಲಸಕ್ಕೆ ಹೋಗುವ ತಾಯಂದಿರ ಚಿಕ್ಕ ಮಕ್ಕಳ ಲಾಲನೆ ಪಾಲನೆಗಾಗಿ ಪ್ರತಿ ಗ್ರಾಮದಲ್ಲಿ ಕೂಸಿನ ಮನೆ ತೆರೆಯಲಾಗಿದೆ. ಅಲ್ಲಿ ಕೂಲಿ ಕಾರ್ಮಿಕರ 3 ವರ್ಷದ ವರೆಗಿನ ಮಕ್ಕಳನ್ನು ಕೆಲಸ ಮುಗಿಸಿ ಬರುವ ವರೆಗೆ ಜೋಪಾನ ಮಾಡಲಾಗುತ್ತದೆ. ಪ್ರತಿ ಪಂಚಾಯಿತಿಗೆ ₹1 ಲಕ್ಷ ಅನುದಾನ ಇದಕ್ಕಾಗಿ ಮುಂಗಡ ಮೀಸಲಿಡಲಾಗಿದೆ. ಇಬ್ಬರು ಕೇರ್ ಟೇಕರ್ ಇಲ್ಲಿರುತ್ತಾರೆ. ನಾಲ್ಕೈದು ಗಂಟೆಗಳ ಕಾಲ ಮಕ್ಕಳಿಗೆ ಪೌಷ್ಟಿಕ ಆಹಾರವನ್ನೂ ನೀಡಿ ಸಂಭಾಳಿಸುತ್ತಾರೆ. 39 ಗ್ರಾಪಂಗಳಲ್ಲಿ ಮಾತ್ರ ಕೂಸಿನ ಮನೆ ಸಾಧ್ಯವಾಗಿದೆ.

ನರೇಗಾ ಯೋಜನೆಯಲ್ಲಿ ಕೆಲಸ ಮಾಡುವವರಿಗೆ ದಿನಕ್ಕೆ ₹500 ಕೂಲಿ ನೀಡಬೇಕು ಎಂಬ ಬೇಡಿಕೆ ಇದೆ. ಕೆರೆ ಒತ್ತುವರಿ ತೆರವು ಮಾಡಬೇಕು, ಕೆರೆಗಳ ಸುತ್ತಲೂ ಕಂದಕ ಮಾಡಿದರೆ ಕೆರೆ ಒತ್ತುವರಿ ಸಾಧ್ಯವಾಗುವುದಿಲ್ಲ. ಕೆರೆ ಸುರಕ್ಷಿತವಾಗಿಯೂ ಇರಲು ಸಾಧ್ಯ ಎಂಬ ಸಲಹೆ ಕೇಳಿಬರುತ್ತಿದೆ.ಕೂಲಿ ಇಲ್ಲದ ಸಮಯದಲ್ಲಿ ಕೃಷಿ ಕಾರ್ಮಿಕರಿಗೆ ಕೆಲಸ ಒದಗಿಸುವ ಅತ್ಯುತ್ತಮ ಯೋಜನೆ ಇದಾಗಿದೆ. ಕೃಷಿ ಕಾರ್ಮಿಕರ ವಲಸೆ ತಪ್ಪಿಸಿದೆ. ಅಲ್ಲದೆ ಕೆರೆ-ಕಟ್ಟೆಗಳು ಮಳೆಗಾಲದಲ್ಲಿ ಹೆಚ್ಚು ನೀರು ತುಂಬುವುದರಿಂದ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳ ಮರುಪೂರಣ ಆಗುತ್ತವೆ. ಜನ-ಜಾನುವಾರುಗಳಿಗೆ ಹೆಚ್ಚು ಕಾಲ ನೀರು ಕೊಡಲು ಸಾಧ್ಯ ಎಂದು ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹವಣಗಿ ಹೇಳುತ್ತಾರೆ.

ಜಾಬ್ ಕಾರ್ಡ್‌ ಆಧರಿಸಿ ನೂರು ದಿನಗಳ ಕೆಲಸವನ್ನು ಕೂಲಿ ಕಾರ್ಮಿಕರಿಗೆ ನೀಡುತ್ತಿರುವುದರಿಂದ ಜನರು ಒಂದಷ್ಟು ನಿರಾಳರಾಗಿದ್ದಾರೆ. ಬರದ ಸಂದರ್ಭದಲ್ಲಿ ಎಲ್ಲಿಯೂ ಕೂಲಿ ಇರಲಿಲ್ಲ. ಆದರೆ ಪಂಚಾಯಿತಿ ಮೂಲಕ ಕೆಲಸ ನೀಡಲಾಗಿದೆ. ಇಲ್ಲಿ ವಿಶೇಷಚೇತನರು, ವಯಸ್ಸಾದವರೂ ಕೆಲಸಕ್ಕೆ ಬರುತ್ತಾರೆ. ಅವರ ಪಾಲಿನ ಕೆಲಸ ಮಾಡುತ್ತಾರೆ. ಈ ಕಾರ್ಯದಿಂದ ಜನ ಸಮಾಧಾನದಿಂದಿದ್ದಾರೆ. ಮಳೆಗೆ ಕೆರೆಗಳಿಗೆ ನೀರು ಬಂದರೆ ಕೆಲಸ ಬಂದ ಆಗುತ್ತವೆ ಎಂದು ಸಾಂವಸಗಿ ಪಿಡಿಒ ಫಕ್ಕೀರಪ್ಪ ಸಾತೇನಹಳ್ಳಿ ಹೇಳುತ್ತಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌