ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಒಂದು ವಿದ್ಯಾಸಂಸ್ಥೆ ಬೆಳವಣಿಗೆಯಲ್ಲಿ ಹಿರಿಯ ವಿದ್ಯಾರ್ಥಿಗಳೇ ನಿಜವಾದ ಅಭಿವೃದ್ಧಿ ಸಾಧನ ಎಂದು ಭಾರತೀಯ ವಿದ್ಯಾಭವನದ ಉಪಾಧ್ಯಕ್ಷ ಪ್ರೊ.ಎನ್.ದಿವಾಕರ್ ರಾವ್ ಅಭಿಪ್ರಾಯಪಟ್ಟರು.ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ ಸ್ಟಡೀಸ್ ಕಾಲೇಜು ವತಿಯಿಂದ ಭಾನುವಾರ ಜೆಎನ್ಎನ್‌ಸಿಇ ಸಭಾಂಗಣದಲ್ಲಿ ಏರ್ಪಡಿಸಿದ್ದ ನೂತನವಾಗಿ ಪ್ರಾರಂಭಗೊಂಡ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ''''''''ಸಂರಿಷ್ಟ-2024''''''''ದ ಸಮಾರಂಭ ಉದ್ಘಾಟಿಸಿ ಮಾತನಾಡಿ,
ಅಡ್ವಾನ್ಸ್‌ಡ ಸ್ಟಡೀಸ್ ಕಾಲೇಜನ್ನು ಪ್ರಾರಂಭಿಸಿದಾಗ ಅನೇಕ ಅಡ್ಡಿ ಆತಂಕಗಳಿದ್ದವು. ವಿಭಿನ್ನ ಕೋರ್ಸ್ ಪ್ರಾರಂಭಿಸುವ ದೂರದೃಷ್ಟಿ ಹಿನ್ನೆಲೆ ಅಡ್ವಾನ್ಸ್‌ಡ ಸ್ಟಡೀಸ್ ಎಂದು ಹೆಸರಿಡಲಾಯಿತು. ಪ್ರಾರಂಭಿಕ ವರ್ಷದಲ್ಲಿಯೇ ವಿಶ್ವವಿದ್ಯಾಲಯದ ಎರಡು ರ‍್ಯಾಂಕ್ ಗಳಿಸಿತ್ತು ಎಂದು ಸ್ಮರಿಸಿದರು.ಪರಿವರ್ತನೆ ಜಗದ ನಿಯಮ. ಯಾರು ಹೊಸ ದಿಕ್ಕಿನೆಡೆಗೆ ಹೊಸ ಭಾವದೊಂದಿಗೆ ಮುಂದುವರೆಯುತ್ತಾರೆ, ಅವರು ತಮ್ಮ ಗುರಿ ತಲುಪುತ್ತಾರೆ. ಅದಕ್ಕಾಗಿ ಸೂಕ್ತ ಸ್ಪಂದನೆ ನಿರಂತರ ತೊಡಗಿಸಿಕೊಳ್ಳುವಿಕೆ ಅತ್ಯವಶ್ಯಕ. ಎಲ್ಲರ ಬದುಕು ಸವಾಲುಗಳ ಕತ್ತಲಿನಿಂದಲೇ ಪ್ರಾರಂಭಗೊಳ್ಳುತ್ತದೆ. ಆದರೆ ಮುಂದೆ ಕತ್ತಲೆ ಕಳೆದು ಬೆಳಕಿನೆಡೆಗೆ ಸಾಗಬಹುದು ಎಂಬ ಅರಿವು ನಮಲ್ಲಿ ಮುಖ್ಯ. ಇಂಥಹ ಅರಿವು ಪಡೆಯುವುದೆ ಕನಸು ಕಂಡಾಗ. ಆಗ ಮಾತ್ರ ಗುರಿ ಸ್ಪಷ್ಟತೆ ನಮಗಾಗುವುದು.
ಕನಸಿಗೆ ನಮ್ಮನ್ನು ನೈಜತೆಯೆಡೆಗೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿಯಿದೆ. ಸೋಲು ಅಡೆತಡೆಗಳು ನಮ್ಮನ್ನು ಕನಸಿನ ಹಾದಿಯಿಂದ ಹಿಂದೆ ಸರಿಯುವಂತೆ ಮಾಡದಿರಲಿ. ಕನಸು ನನಸಾಗುವವರೆಗೆ ಆತ್ಮವಿಶ್ವಾಸ ಕಳೆದುಕೊಳ್ಳದಿರಿ. ಸಂಕೋಚ ನಮ್ಮೊಳಗಿನ ದೊಡ್ಡ ಶತ್ರು. ಕಲಿಕೆಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಸದಾ ಹೊಸತನದ ಕಲಿಕೆ ಧೈರ್ಯ ಕಾತರ ನಮ್ಮಲ್ಲಿರಬೇಕು ಎಂದು ಸಲಹೆ ನೀಡಿದರು.ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದ ದಿನಗಳು ಎಂದಿಗೂ ಮರೆಯಲಾಗದು. ಇಂದು ಹಿರಿಯ ವಿದ್ಯಾರ್ಥಿಗಳು ನೀಡುವ ದೇಣಿಗೆ ಎನ್ಇಎಸ್ ಅಸಿಸ್ಟಾನ್ಸ್ ಟ್ರಸ್ಟ್ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದೇವೆ. ಹಿರಿಯ ವಿದ್ಯಾರ್ಥಿಗಳ ಕೊಡುಗೆ ವಿದ್ಯಾಸಂಸ್ಥೆಗೆ ನಿರಂತರವಾಗಿರಲಿ ಎಂದು ಹೇಳಿದರು.
ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ ಸ್ಟಡೀಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಯ್ ಪಾಟೀಲ್, ಉಪಾಧ್ಯಕ್ಷ ಜಿ. ಓಂಕಾರ್, ಕಾರ್ಯದರ್ಶಿ ಪೃಥ್ವಿರಾಜ್ ಗಿರಿಮಾಜಿ, ಸಹ ಕಾರ್ಯದರ್ಶಿ ಜಿ.ಎಸ್. ಕುಶಾಲ್, ಖಜಾಂಚಿ ಎನ್.ಎಂ.ಸುಪ್ರಿತ್ ಉಪಸ್ಥಿತರಿದ್ದರು.