ಕನ್ನಡಪ್ರಭ ವಾರ್ತೆ ಭದ್ರಾವತಿ
ಮೈಸೂರು ಮಹಾರಾಜರ ಆಡಳಿತದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರು ಕಟ್ಟಿದ ಉಕ್ಕಿನ ಕಾರ್ಖಾನೆ ಈಗ ಸ್ವಲ್ಪ ಉಸಿರಾಡುತ್ತಿದೆ. ಇದಕ್ಕೆ ಅಗತ್ಯ ಬಂಡವಾಳ ಹೂಡಿಕೆ ಹಾಗೂ ಕಾರ್ಖಾನೆ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದರು.ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾನುವಾರ ಮೊದಲ ಬಾರಿಗೆ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಬೇಕು. ಇದರೊಂದಿಗೆ ಇತಿಹಾಸದ ಗತವೈಭವ ಮರಳಿ ದೊರಕಿಸಿಕೊಡಬೇಕು. ಅವಲ೦ಬಿತ ಸಾವಿರಾರು ಕುಟುಂಬಗಳಿಗೆ ಉತ್ತಮ ರೀತಿ ಜೀವನೋಪಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ನನಗೆ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದರು.
ಕಾರ್ಮಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕಾರ್ಮಿಕರ ಆಶೋತ್ತರಗಳಿಗೆ ನಿರಂತರ ಧ್ವನಿಯಾಗಬೇಕು ಎಂಬ ನನ್ನ ಬದ್ಧತೆ ಮಾರ್ಗ ಸರಿ ದಾರಿಗೆ ಸಾಗುವವರೆಗೂ ವಿಶ್ರಾಂತಿ ಇಲ್ಲ ಎಂದು ಮತ್ತೊಮ್ಮೆ ವಾಗ್ದಾನ ಮಾಡುತ್ತಿದ್ದೇನೆ. ಕಾರ್ಖಾನೆಗೆ ಅಗತ್ಯ ಬಂಡವಾಳ ಹೂಡಿಕೆ ಹಾಗೂ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಚರ್ಚಿಸಲಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಹಾಗೂ ಜಿಲ್ಲೆಯಲ್ಲಿರುವ ಎಲ್ಲಾ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕಾರ್ಖಾನೆ ಉಳಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕಾರ್ಖಾನೆ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ಸಚಿವರು:ಇದಕ್ಕೂ ಮೊದಲು ಕೇಂದ್ರ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರಿಂದು ಪ್ರಕಾಶ್ ಹಾಗೂ ಕಾರ್ಖಾನೆ ಸ್ಥಳೀಯ ಅಧಿಕಾರಿಗಳು ಸನ್ಮಾನಿಸುವ ಮೂಲಕ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ನಂತರ ಅಮರಿಂದು ಪ್ರಕಾಶ್ ಹಾಗೂ ಅಧಿಕಾರಿಗಳು ಕಾರ್ಖಾನೆ ಯಂತ್ರೋಪಕರಣ, ಕಾರ್ಯಾಚರಣೆ ವಿಧಾನಗಳು, ಉತ್ಪಾದನೆ, ಕಚ್ಛಾ ಸಾಮಾಗ್ರಿಗಳ ವಿವರಣೆ ಸೇರಿ ಹಲವು ಮಾಹಿತಿ ಸಚಿವರಿಗೆ ನೀಡಿದರು. ಕಾರ್ಖಾನೆ ಸಂಸ್ಥಾಪಕರಿಗೆ ಮಾರ್ಲಾಪಣೆ :ಕಾರ್ಖಾನೆ ವೀಕ್ಷಣೆಗೂ ಮೊದಲು ಸಚಿವ ಎಚ್.ಡಿ. ಕುಮಾರಸ್ವಾಮಿ ಕಾರ್ಖಾನೆ ಸಂಸ್ಥಾಪಕ ಹಾಗೂ ಮೊದಲ ಅಧ್ಯಕ್ಷ ವಿಶ್ವದ ಶ್ರೇಷ್ಠ ತಂತ್ರಜ್ಞಾನಿ, ಭಾರತರತ್ನ ಸರ್ ಎಂ. ವಿಶ್ವೇಶ್ವರಾಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಶಾರದಾ ಪೂರ್‍ಯನಾಯ್ಕ, ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ, ಮುಖಂಡರಾದ ಶಾರದಾ ಅಪ್ಪಾಜಿ, ಗೀತಾ ಸತೀಸ್, ಆರ್. ಕರುಣಾಮೂರ್ತಿ, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ಕಾಯಂ ಹಾಗೂ ಗುತ್ತಿಗೆ ಮತ್ತು ನಿವೃತ್ತ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಮಿಕ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.