ಕನ್ನಡಪ್ರಭ ವಾರ್ತೆ ಸರಗೂರು
ತಾಲೂಕಿನ ಸಾಗರೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರಾಥಮಿಕ, ಪ್ರೌಢಶಾಲಾ ವಿಭಾಗ, ಹಿರಿಯ ವಿದ್ಯಾರ್ಥಿಗಳ ಬಳಗದಿಂದ ಗುರುವಂದನಾ, ಸ್ನೇಹ ಸಮ್ಮಿಲನ ಮತ್ತು ಗೀತಾ ಗಾಯನ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.70ಕ್ಕೂ ಹೆಚ್ಚು ಮಂದಿ ಹಿರಿಯ ಗುರುಗಳನ್ನು ಅಭಿನಂದಿಸಲಾಯಿತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಿ, ಗುರು ಇದ್ದರೆ ಗುರಿ ಇರಲಿದ್ದು, ಎಲ್ಲರೂ ಗುರಿಯೆಡೆಗೆ ಸಾಗಬೇಕು. ಸಾಧಿಸುವ ಛಲವಿದ್ದರೆ ಜೀವನದಲ್ಲಿ ಯಶಸ್ಸುಗಳಿಸಬಹುದು. ಈ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿಗಳು, ಯುವಕರು ಹೆಜ್ಜೆ ಇಡಬೇಕು. ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಗುಣಮಟ್ಟದ ಶಿಕ್ಷಣ ಪಡೆದು ಗುಣವಂತರಾಗಬೇಕು ಎಂದು ಸಲಹೆ ನೀಡಿದರು.ಹಿರಿಯ ವಿದ್ಯಾರ್ಥಿ, ಹುಣಸೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ್ ಮಾತನಾಡಿ, ಎಲ್ಲರೂ ಉನ್ನತ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಗೌರವಯುತ ಸ್ಥಾನ ಪಡೆದುಕೊಳ್ಳಬೇಕು. ಪಠ್ಯೆದೊಂದಿಗೆ ಸಹ ಪಠ್ಯೆ ಚಟುವಟಿಕೆಗಳಲ್ಲಿಯೂ ಭಾಗಿಯಾಗಿ ದೈಹಿಕ, ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಇಲ್ಲವಾದಲ್ಲಿ ಮಕ್ಕಳ ಓದು ಕುಂಠಿತವಾಗಲಿದೆ. ಹೀಗಾಗಿ ಎಲ್ಲರೂ ದೈಹಿಕ, ಮಾನಸಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.
ಸಾಗರೆ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ ೭೦ ಕ್ಕೂ ಹೆಚ್ಚು ಮಂದಿ ಹಿರಿಯ ಗುರುಗಳನ್ನು ಅಭಿನಂದಿಸಲಾಯಿತು. ಜನಪದ ಕಲಾವಿದ ಅಮ್ಮ ರಾಮಚಂದ್ರ ಅವರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಾಗರೆ ಕವಿ ಸೂರಿ ತಂಡದಿಂದ ಗುರುಗಳ ಶ್ರೇಷ್ಠತೆ ಕುರಿತ ಹಾಡುಗಳ ಗಾಯನ ಜರುಗಿತು. ನೆಚ್ಚಿನ ಗುರುಗಳೊಂದಿಗೆ ಶಿಷ್ಯ ವೃಂದದವರು ಸೆಲ್ಪಿ ಕ್ಲಿಕ್ಕಿಸಿಕೊಂಡರು.ನಿವೃತ್ತ ಶಿಕ್ಷಣಾಧಿಕಾರಿ ಎಸ್.ಪಿ. ಶಿವಕುಮಾರ್, ಅಂಕಶೆಟ್ಟಿ, ಎಸ್.ಆರ್. ರಾಘವೇಂದ್ರ, ಗ್ರಾಪಂ ಅಧ್ಯಕ್ಷೆ ವಸಂತ ಸಣ್ಣಪ್ಪನಾಯಕ, ಗ್ರಾಪಂ ಮಾಜಿ ಸದಸ್ಯ ಸಾಗರೆ ಮಹೇಂದ್ರ, ಮಹದೇವನಾಯಕ, ಸುನಿಲ್ ಅಂಗಡಿ, ಸುರೇಶ್, ರಾಜೇಶ್, ಶಿಕ್ಷಕರು, ಗ್ರಾಮಸ್ಥರು ಇದ್ದರು.