ಧಾರವಾಡ: ಕನ್ನಡ ವಾಙ್ಮಯ ವಿಹಾರದಲ್ಲಿ ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಶಕ, ಅನುವಾದಕರಾಗಿ ಗುರುತಿಸಿಕೊಂಡಿರುವ ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ (92) ಶುಕ್ರವಾರ ನಗರದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆ ಬಿಸರಹಳ್ಳಿಯಲ್ಲಿ ಜನವರಿ 6, 1933ರಂದು ಜನಿಸಿದ್ದ ಪಂಚಾಕ್ಷರಿಯವರು ರಾಷ್ಟ್ರೀಯ ಚಳುವಳಿಯ ಪ್ರಭಾವಕ್ಕೊಳಗಾಗಿ ತಮ್ಮ ಶಿಕ್ಷಣವನ್ನು ಅರ್ಧದಲಿಯೇ ನಿಲ್ಲಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಧುಮುಕಿದರು. ಹೀಗಾಗಿ, ನಾಲ್ಕು ಗೋಡೆಗಳ ನಡುವಿನ ಅವರ ಶಿಕ್ಷಣ ಅರ್ಧದಲ್ಲಿಯೆ ನಿಂತುಹೋಯಿತು. ಬಹುಮುಖ ವ್ಯಕ್ತಿತ್ವದ ಪಂಚಾಕ್ಷರಿಯವರು ಜೀವನದ ಅನೇಕ ರಂಗಗಳಲ್ಲಿ ತಮ್ಮನ್ನು ತಾವು ಕ್ರಿಯಾಶೀಲವಾಗಿ ತೊಡಗಿಸಿಕೊಂಡರು. ಹೈಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿರುವಾಗಲೆ ಅವರು ವಿದ್ಯಾರ್ಥಿ ಮುಖಂಡರಾಗಿದ್ದರು. ಕಾವ್ಯ, ಗದ್ಯ, ಪತ್ರ ಸಾಹಿತ್ಯ, ಸಣ್ಣಕಥೆ, ಸಂಶೋಧನೆ, ಸಂಪಾದನೆ ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಸಿದ್ಧಿ ಸಾಧಿಸಿದ್ದ ಅವರು ಬಹುಭಾಷಾ ಕೋವಿದರು. ಹಲವು ಭಾಷೆಗಳಿಂದ ಅನೇಕ ಸಾಹಿತ್ಯ ಕೃತಿ ರತ್ನಗಳನ್ನು ಕನ್ನಡಕ್ಕೆ ಅನುವಾದಿಸಿ, ಜೊತೆಗೆ ಅವುಗಳ ಬಗೆಗೆ ಕನ್ನಡದಲ್ಲಿ ಸ್ವತಂತ್ರವಾಗಿ ಬರೆದು ಭಾಷಾ- ಬಾಂಧವ್ಯಕ್ಕೆ ನಾಂದಿ ಹಾಡಿದ್ದರು. ೧೯ ಕಾವ್ಯ ಸಂಕಲನಗಳು, ೧೧ ಕಥಾ ಸಂಕಲನಗಳು, ಉರ್ದು ಮತ್ತು ಹಿಂದಿಯಿಂದ ಕನ್ನಡಕ್ಕೆ ತಂದ ೮ ಅನುವಾದಿತ ಕಾದಂಬರಿಗಳು, ೧೩ ಪ್ರಬಂಧ ಮತ್ತು ವಿಮರ್ಶೆಯ ಕೃತಿಗಳು, ೭ ಚಿಂತನ ಸಾಹಿತ್ಯ ಕೃತಿಗಳು, ೬ ಜೀವನ ಚರಿತ್ರೆಗಳು, ೩ ಪತ್ರ ಸಾಹಿತ್ಯ ಕೃತಿಗಳು, ೨ ಚರಿತ್ರೆಗಳು, ೭ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದಿತ ನಾಟಕಗಳು, ಸಂಪಾದನೆಯ ೮ ಕೃತಿಗಳು, ಹಿಂದಿ, ತೆಲಗು ಹಾಗೂ ಆಂಗ್ಲಭಾಷೆಗೆ ಭಾಷಾಂತರಗೊಂಡ ೮ ಕೃತಿಗಳು ಸೇರಿ ಸುಮಾರು ನೂರಕ್ಕೂ ಹೆಚ್ಚು ಉಪಯುಕ್ತ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದರು. ಸಂದ ಪ್ರಶಸ್ತಿ-ಪುರಸ್ಕಾರಗಳು
ಅಮೇರಿಕೆಯ ಅರಿಝೋನಾದ ಜಾಗತಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (ಡಿ.ಲಿಟ್.) ಪದವಿ ೧೯೮೫, ಪ್ರತಿಷ್ಠಿತ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (ಡಾ.ಹಿರೇಮಠರ ಮಿತ್ರದೇಶದ ಕವಿತೆಗಳು ಸಂಗ್ರಹಕ್ಕೆ) ೧೯೮೮, ಕರ್ನಾಟಕ ಸಾಹಿತ್ಯ ಅಕಾಡಮಿಯ ಅತ್ಯುನ್ನತ ಗೌರವ ಪ್ರಶಸ್ತಿ ೧೯೯೪, ರಾಜ್ಯೋತ್ಸವ ಪ್ರಶಸ್ತಿ ೧೯೯೭, ಪ್ರಯಾಗದಲ್ಲಿ ಜರುಗಿದ ಹಿಂದಿ ಸಮ್ಮೇಳನದಲ್ಲಿ ಸಾಹಿತ್ಯ ಮಾರ್ತಾಂಡ ಪ್ರಶಸ್ತಿ ೨೦೦೩, ದಿಲ್ಲಿಯ ಮಾನವ ಮಂದಿರ ಸಂಸ್ಥೆಯ ಆಚಾರ್ಯ ರೂಪಚಂದ್ರ ಅವರಿಂದ ಯಶಸ್ವೀ ಕವಿ ಪದವಿ ೨೦೦೩, ಅನುವಾದ ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡಮಿಯ ಪುರಸ್ಕಾರ ೨೦೦೫, ಬಾಳೆಹೊನ್ನೂರಿನ ಶ್ರೀಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಸಾಹಿತ್ಯ ಶಿರೋರತ್ನ ಪದವಿ ೨೦೦೬, ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಸಾಹಿತ್ಯ ವಿಭೂಷಣಂ ಪದವಿ ೨೦೦೭, ಕಮಲಾ ಗೋಯಂಕಾ ಫೌಂಡೇಶನ್ ಪ್ರಶಸ್ತಿ ೨೦೧೦, ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ೨೦೧೦, (ಜನವರಿ ೧೦ ಮತ್ತು ೧೧), ಹುಬ್ಬಳ್ಳಿ ಮೂರುಸಾವಿರಮಠದ ಶ್ರೀ ಮೂಜಗಂ ಸಾಹಿತ್ಯ ಪ್ರಶಸ್ತಿ-೨೦೧೧, ಬೆಂಗಳೂರಿನ ಕುವೆಂಪು ಬಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ೨೦೧೫,ಪಾಲ್ಗೊಂಡ ಸಮ್ಮೇಳನಗಳುನೇಪಾಳದಲ್ಲಿ ಜರುಗಿದ ಸಾಹಿತ್ಯ ಸಮಾವೇಶಕ್ಕೆ ಅತಿಥಿಯಾಗಿ ೧೯೮೪, ಗ್ರೀಸ್ ದೇಶದ ಕೊರ್ಫೂದಲ್ಲಿ ಜರುಗಿದ ಜಾಗತಿಕ ಕವಿ ಸಮ್ಮೇಳನ ೧೯೮೫, ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಜರುಗಿದ ವಿಶ್ವ ಕವಿ ಸಮ್ಮೇಳನದ (ರಾಯಲ್ ಥಾಯ್ ಸರಕಾರದ ಆಹ್ವಾನದ ಮೇರೆಗೆ ಪಾಲ್ಗೊಂಡಿದ್ದು) ೧೯೮೮, ಚೀನಾದ ರಾಜಧಾನಿ ಥಾಯ್ಪೆದಲ್ಲಿ ಜರುಗಿದ ೧೫ನೇ ಅಂತಾರಾಷ್ಟ್ರೀಯ ಕವಿ ಸಮ್ಮೇಳನ ೧೯೯೪. ಇಂದು ಅಂತ್ಯಕ್ರಿಯೆ
ಧಾರವಾಡ ಜಯನಗರದಲ್ಲಿರುವ ಡಾ. ಪಂಚಾಕ್ಷರಿ ಹಿರೇಮಠ ಅವರ ನಿವಾಸದಲ್ಲಿ ಶನಿವಾರ ಮುಂಜಾನೆ 8.30ರಿಂದ ಮಧ್ಯಾಹ್ನ 1ರ ವರೆಗೆ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ನಂತರ ಕೊಪ್ಪಳ ಜಿಲ್ಲೆ ಬಿಸರಹಳ್ಳಿಯ ಡಾ. ಪಂಚಾಕ್ಷರಿ ಹಿರೇಮಠ ಅವರ ತೋಟದಲ್ಲಿ ವೀರಶೈವ ಧರ್ಮ ಪದ್ಧತಿಯಂತೆ ಶನಿವಾರ ಸಂಜೆ ಅಂತ್ಯಕ್ರಿಯೆ ಜರುಗಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.