ಅದ್ಧೂರಿ ರಂಗಿನಾಟಕ್ಕೆ ಹಾವೇರಿ ಸಜ್ಜು, ಇಂದು ಸಂಭ್ರಮದ ಓಕುಳಿ ಹಬ್ಬ ಆಚರಣೆ

KannadaprabhaNewsNetwork |  
Published : Mar 15, 2025, 01:01 AM IST
14ಎಚ್‌ವಿಆರ್3 | Kannada Prabha

ಸಾರಾಂಶ

ಹೋಳಿ ಮುನ್ನಾದಿನ ಶುಕ್ರವಾರ ನಗರದ ಮಾರುಕಟ್ಟೆಯಲ್ಲಿ ಹೋಳಿ ಆಚರಣೆಯ ವಿವಿಧ ಬಗೆಯ ಬಣ್ಣ, ಸಾಮಗ್ರಿಗಳ ಖರೀದಿ ಭರದಿಂದ ನಡೆಯಿತು.

ಹಾವೇರಿ: ನಗರದಲ್ಲಿ ಹೋಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದ್ದು, ತಮಟೆ ಶಬ್ದ ಕಿವಿಗಡಚಿಕ್ಕುತ್ತಿದೆ. ರಂಗು- ರಂಗಿನ ಬಣ್ಣಗಳ ಹೋಳಿಯ ಓಕುಳಿ ಆಟಕ್ಕೆ ಜನತೆ ಸಿದ್ಧರಾಗಿದ್ದು, ಮಾ. 15ರಂದು ಬಣ್ಣದ ಓಕುಳಿಯಲ್ಲಿ ಜನತೆ ಮಿಂದೇಳಲಿದ್ದಾರೆ. ಹೋಳಿ ಹಬ್ಬದ ಮುನ್ನಾ ದಿನವಾದ ಶುಕ್ರವಾರ ಸಂಜೆ ನಗರದಲ್ಲಿ ಆಯೋಜಿಸಿದ್ದ ಪ್ರಯಾಗರಾಜ್‌ ಮಹಾ ಕುಂಭಮೇಳ ಕಲ್ಪನೆಯ ಮೆರವಣಿಗೆ ಗಮನ ಸೆಳೆಯಿತು.ಹೋಳಿ ಮುನ್ನಾದಿನ ಶುಕ್ರವಾರ ನಗರದ ಮಾರುಕಟ್ಟೆಯಲ್ಲಿ ಹೋಳಿ ಆಚರಣೆಯ ವಿವಿಧ ಬಗೆಯ ಬಣ್ಣ, ಸಾಮಗ್ರಿಗಳ ಖರೀದಿ ಭರದಿಂದ ನಡೆಯಿತು. ಎಂ.ಜಿ. ರಸ್ತೆಯಲ್ಲಿ ಬಣ್ಣದ ವ್ಯಾಪಾರ ತುಸು ಜೋರಾಗಿ ನಡೆದಿದೆ. ಅಲ್ಲದೇ ಫೈಬರ್ ಹಲಗೆ ಹಾಗೂ ವಿವಿಧ ಬಗೆಯ ಮುಖವಾಡಗಳ ಮಾರಾಟವೂ ಭರದಿಂದ ಸಾಗಿದೆ. ಹೋಳಿ ಹಬ್ಬದ ನಿಮಿತ್ತ ಇಲ್ಲಿನ ಹಳೆ ಚಾವಡಿ ಸಮೀಪ ಸರ್ಕಾರಿ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿದ್ದು, ಅನೇಕ ಸಂಘ- ಸಂಸ್ಥೆಗಳು ರತಿ- ಮನ್ಮಥ ಮೂರ್ತಿಗಳನ್ನು ನಗರದ ಗಲ್ಲಿ- ಗಲ್ಲಿಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಚಾವಡಿ ವೃತ್ತ, ಏಲಕ್ಕಿ ಓಣಿ, ದೇಸಾಯಿ ಗಲ್ಲಿ, ಅಕ್ಕಿಪೇಟಿ, ಮುಷ್ಠೇರ ಓಣಿ, ಶಿವಾಜಿ ನಗರ, ನಾಗೇಂದ್ರನಮಟ್ಟಿ, ಪುರದ ಓಣಿ ಸೇರಿದಂತೆ ನಗರದ ವಿವಿಧ ಬಡಾವಣೆ, ಗಲ್ಲಿ- ಗಲ್ಲಿಗಳ ವಿವಿಧೆಡೆ ಈಗಾಗಲೇ ರತಿ ಕಾಮಣ್ಣರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮಕ್ಕಳು ರಂಗು- ರಂಗಿನ ಬಣ್ಣದಾಟವಾಡಲು ಕಾತುರದಿಂದ ಕಾಯುತ್ತಿದ್ದು, ಶನಿವಾರ ಕಾಮದಹನ ನಡೆಯಲಿದೆ.ಹೋಳಿ ಹಬ್ಬ ಆಚರಣೆ ಹಿನ್ನೆಲೆ ನಗರದೆಲ್ಲೆಡೆ ಕೇಸರಿ ಬಾವುಟಗಳು, ಸ್ವಾಗತ ಕಮಾನುಗಳನ್ನು ರಾರಾಜಿಸುತ್ತಿವೆ. ಗಲ್ಲಿ ಗಲ್ಲಿಯಲ್ಲಿ ಕೇಸರಿ ಬಾವುಟಗಳನ್ನು ಕಟ್ಟುವ ಕೆಲಸದಲ್ಲಿ ಯುವಕರು ತಲ್ಲಿನರಾಗಿದ್ದಾರೆ. ಅಲ್ಲಲ್ಲಿ ಆಂಜನೇಯ, ಛತ್ರಪತಿ ಶಿವಾಜಿಯ ಕಟೌಟ್‌ಗಳು ಕಂಡುಬರುತ್ತಿವೆ.ಹೋಳಿ ಹಬ್ಬದ ಹಿನ್ನೆಲೆ ಮಕ್ಕಳು, ಯುವಕರು ತಮಟೆ ಬಾರಿಸುತ್ತ, ಕುಣಿಯುತ್ತ, ಕೇಕೇ ಹಾಕುತ್ತ ಓಣಿ ಓಣಿ ಓಡಾಡುತ್ತಿದ್ದಾರೆ. ಓಕುಳಿ ದಿನವಂತೂ ತಮಟೆಯ ಶಬ್ದ ಮುಗಿಲು ಮುಟ್ಟುತ್ತದೆ. ವಯಸ್ಸಿನ ಹಂಗಿಲ್ಲದೆ ಎಲ್ಲರೂ ಕೂಡಿ ಬಣ್ಣದ ಲೋಕದಲ್ಲಿ ತೇಲಾಡುಲು ಜನತೆ ಕಾತುರರಾಗಿದ್ದಾರೆ. ಹೋಳಿಯಾಟಕ್ಕೆ ಸಕಲ ರೀತಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಹೋಳಿ ಹಬ್ಬದ ಅಂಗವಾಗಿ ಓಕುಳಿ ಸಂಭ್ರಮವನ್ನು ಹೆಚ್ಚಿಸಲು ಸಾರ್ವಜನಿಕರು ವಿವಿಧ ಬಣ್ಣಗಳನ್ನು ಖರೀದಿಸಲು ಮುಂದಾಗಿದ್ದಾರೆ. ಹೋಳಿ ಹುಣ್ಣಿಮೆ ಪ್ರಯುಕ್ತ ಕೇಸರಿ, ಹಸಿರು, ಗುಲಾಬಿ, ಕೆಂಪು, ಹಳದಿ, ನೀಲಿ ಸೇರಿದಂತೆ ವಿವಿಧ 9 ಬಗೆಯ ಬಣ್ಣಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಅಷ್ಟೇ ಅಲ್ಲದೇ ಬಣ್ಣ ಮಿಶ್ರಿತ ನೀರನ್ನು ಪರಸ್ಪರ ಸ್ನೇಹಿತರಿಗೆ ಎರಚುವ ನಿಟ್ಟಿನಲ್ಲಿ ಪಿಚಕಾರಿ ಖರೀದಿಯೂ ನಡೆಯುತ್ತಿದೆ. ಜತೆಗೆ ಮಂಕೀ ಕ್ಯಾಪ್, ಕರಡಿ ಮುಖ ತ್ರಿಡಿ, ಸ್ವಾಮೀಜಿ ಜಡೆ, ಕ್ರಿಷ್ ಮಾಸ್ಕ್‌, ಜೋಕರ್ ಮಾಸ್ಕ್‌, ಮಕ್ಕಳ ಮುಖವಾಡ, ರಾಕ್ಷಸ ಕ್ಯಾಪ್, ವಾಟರ್ ಬಲೂನ್, ಚೇಸ್ಮಾ, ಕೃಷ್ಣನ ಮುಖ, ಐರನ್ ಮ್ಯಾನ್ ಮಾಸ್ಕ್, ಗಡ್ಡ, ಮೀಸೆ, ಮಿಂಚು, ರಾಕ್ಷಸ ಜಡೆ ಹೀಗೆ ವಿವಿಧ ಬಗೆಯ ಸಾಮಗ್ರಿಗಳನ್ನು ಜೋರಾಗಿ ಖರೀದಿ ಮಾಡುತ್ತಿರುವ ದೃಶ್ಯಗಳು ನಗರದೆಲ್ಲೆಡೆ ಕಂಡುಬರುತ್ತಿದೆ.ಗಮನ ಸೆಳೆದ ಮಹಾಕುಂಭಮೇಳದ ಮರುಕಲ್ಪನೆ ಬೃಹತ್ ಮೆರವಣಿಗೆಹಾವೇರಿ ನಗರದ ಹೋಳಿ ಆಚರಣಾ ಸಮಿತಿ ವತಿಯಿಂದ ಈ ಬಾರಿ ಹೋಳಿ ಹಬ್ಬ ಮುನ್ನಾದಿನ ಶುಕ್ರವಾರ ಸಂಜೆ ನಗರದಲ್ಲಿ ಆಯೋಜಿಸಿದ್ದ ಪ್ರಯಾಗರಾಜ್‌ನ ಮಹಾ ಕುಂಭಮೇಳ ಮಾದರಿಯ ಮರುಸೃಷ್ಟಿ ಬೃಹತ್ ಮೆರವಣಿಗೆ ಗಮನ ಸೆಳೆಯಿತು.ಸ್ಥಳೀಯ ಅಕ್ಕಿಪೇಟೆಯ ಅರಳಿಮರದಿಂದ ಆರಂಭಗೊಂಡ ಬೃಹತ್ ಮೆರವಣಿಗೆಯಲ್ಲಿ 2 ಆನೆ, ನಾಲ್ಕು ಒಂಟೆ, ಕುದುರೆಗಳು ಸೇರಿದಂತೆ ಹಾವೇರಿ ನಗರ, ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಿಂದ ಆಗಮಿಸಿದ್ದ ಮಹಾಶಿವನ ಮೂರ್ತಿ, ಹಿಮ ಶಿವಲಿಂಗದಲ್ಲಿ ಮೂಡಿದ ಶಿವ ಮತ್ತು ತಪಸ್ವಿಗಳು, ಟ್ರ್ಯಾಕ್ಟರ್ ಬಾಬಾಗಳು, ಮುಳ್ಳಿನ ಮೇಲೆ ಕುಳಿತ ನಾಗಾಸಾಧು, ಯಮ ಬಾಬಾ, ರುದ್ರಾಕ್ಷಿ ಬಾಬಾಗಳು, ನಂದಿ ಮೇಲೆ ಕುಳಿತ ನಾಗಾಸಾಧು, ಕಿನ್ನರಿ ಜೋಗಿ ಮಾತಾ, ಬೆಂಕಿ ಉಗುಳುವ ನಾಗಾಸಾಧುಗಳು, ಮೊನಾಲಿಸಾ ಮಾದರಿ ಹೀಗೆ ಸುಮಾರು 60ಕ್ಕೂ ಹೆಚ್ಚು ಅಘೋರಿಗಳು, ನಾಗಾ ಸಾಧುಗಳ ವೇಷಧಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ