-ಯುವಕರು ಪರಸ್ಪರ ಬಣ್ಣದ ನೀರು ಎರಚಿ ಹೋಳಿ ಹಬ್ಬಆಚರಣೆ । ಬಣ್ಣದೋಕುಳಿಯಲ್ಲಿ ಎಲ್ಲ ವಯೋಮಾನದವರು ಭಾಗಿ
------ಕನ್ನಡಪ್ರಭ ವಾರ್ತೆ ಅಫಜಲ್ಪುರ
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹೋಳಿ ಹಬ್ಬಸಂಭ್ರಮದಿಂದ ಆಚರಿಸಲಾಯಿತು. ಯುವಕರು ಪರಸ್ಪರ ಬಣ್ಣದ ನೀರು ಎರಚಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಯುವಕ–ಯುವತಿಯರು, ಮಕ್ಕಳು ಪರಸ್ಪರ ಬಣ್ಣ ಎರಚಿ ಬಣ್ಣಗಳ ರಂಗಿನಲ್ಲಿ ಮಿಂದೆದ್ದರು.ಗ್ರಾಮೀಣ ಪ್ರದೇಶದಲ್ಲಿ ಕತ್ತಲು ಕಳೆದು ಬೆಳಕು ಮೂಡುತ್ತಿದ್ದಂತೆ ಮಕ್ಕಳು ಬಣ್ಣದಾಟ ಆಡಿದರು.
ಪೋಷಕರು ತಂದಿದ್ದ ವಿವಿಧ ಬಣ್ಣಗಳನ್ನು ಪಿಚಕಾರಿಗಳಲ್ಲಿ ನೀರಿನೊಂದಿಗೆ ಹಾಕಿ ಪರಸ್ಪರ ಎರಚಿ ಸಂಭ್ರಮಪಟ್ಟರು. ಮಕ್ಕಳ ಸಂಭ್ರಮದಲ್ಲಿ ಪೋಷಕರು ಭಾಗಿಯಾಗಿ ಸಂತಸಪಟ್ಟರು. ಇನ್ನು ಯುವಕರು ತಮ್ಮ ಗೆಳೆಯರ ಮನೆಗಳಿಗೆ ತೆರಳಿ ಬಣ್ಣ ಹಚ್ಚಿದರು. ಮಕ್ಕಳು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಎಲ್ಲ ವಯೋಮಾನದವರು ಬಣ್ಣದೋಕುಳಿಯಲ್ಲಿ ಪಾಲ್ಗೊಂಡಿದ್ದರು.ಮಾರುಕಟ್ಟೆಯಿಂದ ತಂದಿದ್ದ ಬಣ್ಣದ ಪುಡಿಯನ್ನು ಕೈಯಲ್ಲಿ ಹಾಕಿಕೊಂಡು ಅದಕ್ಕೆ ಸ್ಪಲ್ಪ ನೀರು ಮಿಶ್ರಣ ಮಾಡಿ ಸ್ನೇಹಿತರು, ಪರಿಚಯಸ್ಥರ ಮುಖಕ್ಕೆ ಹಚ್ಚಿದರು. ಮಹಿಳೆಯರು ಕುಟುಂಬಸ್ಥರೊಂದಿಗೆ ಹಾಗೂ ಅಕ್ಕಪಕ್ಕದ ಮನೆಗಳ ಸ್ತ್ರೀಯರೊಂದಿಗೆ ಹೋಳಿ ಆಚರಿಸಿದರು.
ವಿವಿಧ ಸಂಘ–ಸಂಸ್ಥೆಗಳ ಸದಸ್ಯರೂ ಪರಸ್ಪರ ಗುಲಾಲು ಎರಚಿದರು. ಬಣ್ಣ ಹಚ್ಚಿ ಸಂಭ್ರಮಿಸಿದರು.ಮಧ್ಯಾಹ್ನದ ನಂತರ ಹಳ್ಳಿಗಳಲ್ಲಿ ಯುವಕರು ಸ್ನಾನಕ್ಕಾಗಿ ಸಮೀಪದ ಕೆರೆ, ನದಿಗಳಿಗೆ ತೆರಳಿದರೆ, ಪಟ್ಟಣದ ಜನ ಮನೆಯಲ್ಲಿಯೇ ಸ್ನಾನ ಮುಗಿಸಿದರು. ಕೆಲವರು ಪರಿಚಿತರ ತೋಟದ ಬಾವಿಗಳಿಗೆ ಹೋಗಿ ಶುಚಿಯಾದರು.
ಕಾಮದಹನ: ಗುರುವಾರ ತಡರಾತ್ರಿ ಕುಳ್ಳು, ಕಟ್ಟಿಗೆಗಳ ರಾಶಿ ಹಾಕಿ ಕಾಮದಹನ ಮಾಡಲಾಯಿತು. ಹಳ್ಳಿಗಳಲ್ಲಿ ಮಕ್ಕಳು ಮತ್ತು ಯುವಕರು ಹಲಗೆ ಸದ್ದಿನೊಂದಿಗೆ ಅದರ ಸುತ್ತಲೂ ಹೆಜ್ಜೆ ಹಾಕಿದರು. ಬೆಳಕು ಹರಿಯುತ್ತಿದ್ದಂತೆ ಕಾಮದಹನ ಮಾಡಿದ ಬೆಂಕಿಕೆಂಡವನ್ನು ಮನೆಗೆ ತೆಗೆದುಕೊಂಡು ಹೋಗಿ ಒಲೆ ಹಚ್ಚಿದರು.ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ದೇವಸ್ಥಾನ ಆವರಣ, ವಿವಿಧ ಬಡಾವಣೆ, ಎದುರು ಕಾಮದಹನ ಕಂಡು ಬಂತು.