2.5 ತಿಂಗಳಲ್ಲಿ 2500ಕ್ಕೂ ಅಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ

KannadaprabhaNewsNetwork | Published : Mar 15, 2025 1:01 AM

ಸಾರಾಂಶ

2500ಕ್ಕೂ ಅಧಿಕ ಆಲಿವ್ ರಿಡ್ಲೆ ಕಡಲಾಮೆಗಳನ್ನು ಸಮುದ್ರಕ್ಕೆ ಬಿಡಲಾಗಿದೆ.

ಕಾರವಾರ: ಕಾರವಾರ-ಅಂಕೋಲಾ ಅರಣ್ಯ ವಿಭಾಗದಲ್ಲಿ ಜನೇವರಿಯಿಂದ ಇದುವರೆಗೆ 2500ಕ್ಕೂ ಅಧಿಕ ಆಲಿವ್ ರಿಡ್ಲೆ ಕಡಲಾಮೆಗಳನ್ನು ಸಮುದ್ರಕ್ಕೆ ಬಿಡಲಾಗಿದ್ದು, 111 ಕಡಲಾಮೆಗಳ ಗೂಡುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ. ರವಿಶಂಕರ್ ಹೇಳಿದರು.

ನಗರದ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಶುಕ್ರವಾರ ಅಂದಾಜು 150 ಆಲಿವ್ ರಿಡ್ಲೆ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಸ್ತುತ ಎರಡು ಗೂಡುಗಳ 152 ಮೊಟ್ಟೆಗಳಿಂದ 149 ಮರಿಗಳು ಹೊರಬಂದಿದ್ದು, ಇದು ಉತ್ತಮ ಬೆಳವಣಿಗೆಯಾಗಿದೆ. ಮೊಟ್ಟೆಯಿಂದ ಹೊರಬಂದ ಸಂರಕ್ಷಣೆ ಮಾಡಿದ ಕಡಲಾಮೆ ಮರಿಗಳನ್ನು 51 ದಿನದ ನಂತರ ಸಮುದ್ರಕ್ಕೆ ಬಿಡಲಾಗಿದೆ. ಕಾರವಾರ ವಿಭಾಗದಲ್ಲಿ ಕೋಸ್ಟಲ್ ಮರೈನ್ ಸೇಲ್ ಸ್ಥಾಪಿಸಿಲಾಗಿದ್ದು, ಇದರಿಂದ ಕಡಲಾಮೆಗಳ ಗೂಡುಗಳ ಮತ್ತು ಮೊಟ್ಟೆಗಳ ರಕ್ಷಣೆ ಮಾಡಿ, ಮರಿಗಳನ್ನು ಪೋಷಣೆ ಮಾಡಿ ಸಮುದ್ರಕ್ಕೆ ಬಿಡಲಾಗುತ್ತದೆ ಎಂದರು. ಹೊನ್ನಾವರದಲ್ಲಿ ಕಳೆದ ವರ್ಷ 150 ಕಡಲಾಮೆ ಗೂಡುಗಳನ್ನು ಸಂರಕ್ಷಣೆ ಮಾಡಲಾಗಿತ್ತು. ಈ ವರ್ಷ ಕೂಡ ಅಲ್ಲಿ 200 ಗೂಡುಗಳನ್ನು ರಕ್ಷಣೆ ಮಾಡಲಾಗಿದೆ. ಪ್ರತಿವರ್ಷ ಕಾರವಾರ ಮತ್ತು ಹೊನ್ನಾವರದಲ್ಲಿ ಪ್ರತ್ಯೇಕವಾಗಿ 10,000 ಕಡಲಾಮೆ ಮೊಟ್ಟೆಗಳನ್ನು ರಕ್ಷಣೆ ಮಾಡಿ ಹೊರಬಂದ ಮರಿಗಳನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ ಎಂದು ತಿಳಿಸಿದರು.

ಸಮುದ್ರ ತೀರದಲ್ಲಿ ಕಡಲಾಮೆಗಳ ಮೊಟ್ಟೆಗಳು ಇರುವುದು ಕಂಡು ಬಂದರೆ ಈ ಗೂಡುಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದವರಿಗೆ ಹಾಗೂ ತಂದು ಕೊಟ್ಟವರಿಗೆ ಒಂದು ಸಾವಿರ ರುಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇದುವರೆಗೆ ₹ 1 ಲಕ್ಷಕ್ಕೂ ಅಧಿಕ ಮೊತ್ತದ ಪ್ರೋತ್ಸಾಹಧನ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಬಿ. ಶಿವಕುಮಾರ್, ಕಾರವಾರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ. ನಾಯಕ್, ವಲಯ ಅರಣ್ಯಾಧಿಕಾರಿ ಕಿರಣ್ ಮನೋ ಆಚಾರ್ಯ ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Share this article