ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶುಶ್ರೂಷಕ ವೃತ್ತಿ ಸೇವೆಯ ಜತೆಗೆ ಆತ್ಮ ತೃಪ್ತಿ ನೀಡುವ ವೃತ್ತಿಯಾಗಿದ್ದು ನರ್ಸಿಂಗ್ ವಿದ್ಯಾರ್ಥಿಗಳು ವೃತ್ತಿಯನ್ನು ಗೌರವದಿಂದ ಸ್ವೀಕರಿಸಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಕಿವಿಮಾತು ಹೇಳಿದರು.ತಾಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದಕ್ಕೆ ದಿಢೀರ್ ಭೇಟಿ ನೀಡಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ವಿದ್ಯಾರ್ಥಿಗಳಿಗೆ ರೋಗಿಯ ಆರೈಕೆ ಮತ್ತು ಕರ್ತವ್ಯ ನಿಷ್ಠೆ ಉಳ್ಳವರಾದಾಗ ಮಾತ್ರ ವೃತ್ತಿಗೆ ಗೌರವ ದೊರಕಿಸಿಕೊಟ್ಟಂತಾಗುತ್ತದೆ ಎಂದರು.
ಮಾನವೀಯ ಮೌಲ್ಯ ಪಾಲಿಸಿತರಬೇತಿಯಲ್ಲಿ ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಮಾನವೀಯ ಮೌಲ್ಯಗಳ ಮಹತ್ವ ಅರಿತು ಪಾಲಿಸಬೇಕು. ಶುಶ್ರೂಷಕರು ವೈದ್ಯರಿಗಿಂತ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ರೋಗಿಗೆ ಹತ್ತಿರವಾಗಿ ಅವರ ಯೋಗ ಕ್ಷೇಮ ನೋಡಿಕೊಳ್ಳುವ ಜತೆಗೆ ಮಹತ್ವದ ಕರ್ತವ್ಯಗಳನ್ನು ನಿರ್ವಹಿಸುವುದರಿಂದ ಈ ವೃತ್ತಿ ಅತ್ಯಂತ ಮಹತ್ವ ಪಡೆದುಕೊಂಡಿದೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ವಿಫಲವಾದ ಅವಕಾಶಗಳಿದ್ದು, ಅದನ್ನು ಉಪಯೋಗಿಸಿಕೊಳ್ಳಿ. ವೃತ್ತಿ ಮೇಲ್ನೋಟಕ್ಕೆ ಕಠಿಣ ಎನಿಸಿದರೂ ಇದರಲ್ಲಿ ದೊರೆಯುವ ಸಂತೃಪ್ತಿ ಇತರೆ ವೃತ್ತಿಗಳಲ್ಲಿ ದೊರೆಯಲು ಸಾಧ್ಯವಿಲ್ಲ. ಉದ್ಯೋಗದ ಜತೆ ಸೇವೆ ಮತ್ತು ಸಮರ್ಪಣಾ ಭಾವ ಉಳ್ಳವರಾದರೆ ಯಶಸ್ಸು ಮತ್ತು ಕೀರ್ತಿ ಲಭಿಸಲಿದೆ. ಮದರ್ ತೆರೆಸಾ, ಹೆಲೆನ್ ಕೆಲ್ಲರ್ ಮುಂತಾದ ಮಹಾನ್ ಚೇತನಗಳ ತತ್ತ್ವ, ಸಿದ್ಧಾಂತ ಹಾಗೂ ಕಾರ್ಯ ಹಾಗೂ ನಿಮ್ಮ ಪೋಷಕರೂ ನಿಮಗೆ ಸದಾ ಸ್ಫೂರ್ತಿಯಾಗಿರಲಿ ಎಂದರು.ವೈದ್ಯರು ನಿಸ್ವಾರ್ಥ ಸೇವೆ ಸಲ್ಲಿಸಿ
ನಂತರ ಪ್ರಥಮ ವರ್ಷದ ವೈದ್ಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ವೈದ್ಯಕೀಯ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು, ಸಮಾಜದಲ್ಲಿ ವೈದ್ಯರನ್ನು ಗೌರವದಿಂದ ಕಾಣುವ ಹಾಗೂ ದೊಡ್ಡ ಸ್ಥಾನದಲ್ಲಿ ಗುರುತಿಸುವ ವೃತ್ತಿಯಾಗಿದೆ. ವೈದ್ಯಕೀಯ ವೃತ್ತಿ ಉದಾತ್ತ(ನೋಬೆಲ್) ಕೆಲಸ, ವೈದ್ಯರಾದ ನಂತರ ನಿಸ್ವಾರ್ಥ ವೃತ್ತಿ ಪರತೆ ಬೆಳಸಿಕೊಳ್ಳಿ,ಉತ್ತಮ ವೈದ್ಯ ರೋಗಿಗೆ ಚಿಕಿತ್ಸೆ ನೀಡುತ್ತಾನೆ. ಸಾಮಾನ್ಯ ವೈದ್ಯ ಕಾಯಿಲೆಗೆ ಮಾತ್ರ ಚಿಕಿತ್ಸೆ ನೀಡುತ್ತಾನೆ. ರೋಗಿಯನ್ನು ಮಾನವೀಯ ಗುಣಗಳಿಂದ ಕಾಣಬೇಕು. ವೈದ್ಯರು ಹಣದ ಬಗ್ಗೆ ಯೋಚಿಸದೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ವೃತ್ತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಹಣವೇ ತಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ ಎಂದರು.ವೈದ್ಯಕೀಯ ವಿದ್ಯಾರ್ಥಿಗಳು ದೊಡ್ಡ ಕನಸು ಹೊಂದಿರಬೇಕು. ಸಾಧನೆಗೆ ಯಾವುದೇ ಶಾರ್ಟ್ ಕಟ್‌ಗಳು ಇರುವುದಿಲ್ಲ, ಪರಿಶ್ರಮ, ಸಮಯ ಪಾಲನೆ, ಬದ್ದತೆಯಿಂದ ತಮ್ಮ ಗುರಿ ತಲುಪಲು ಸಾಧ್ಯ. ಕೇವಲ ಅಂಕ ಗಳಿಕೆಯಿಂದ ಯಶಸ್ಸು ಸಾಧ್ಯ, ಅವನಿಗಿಂತ ಹೆಚ್ಚಿನ ಅಂಕ ಪಡೆಯಬೇಕೆಂಬ ಹೋಲಿಕೆ ಮನೋಭಾವ ಬೇಡ ಎಂದ ಅವರು, ಉತ್ತಮ ವೈದ್ಯರಾಗಲು ಮೊದಲು ತನ್ನ ವೃತ್ತಿಯ ಮಹತ್ವ ಮತ್ತು ಧ್ಯೇಯವನ್ನು ತಿಳಿದು ಸೇವೆಯಲ್ಲಿ ತೊಡಗುವಂತೆ ತಿಳಿಸಿದರು.
ತಾಯಿ ಹೆಸರಲ್ಲಿ ಆ್ಯಂಬುಲೆನ್ಸ್
ನಾನು ನನ್ನ ಸ್ವಂತ ಹಣದಿಂದ ನನ್ನ ತಾಯಿ ಮಂಜುಳ ರವರ ಹೆಸರಿನಲ್ಲಿ ಉಚಿತವಾಗಿ 10 ಅಮ್ಮ ಆಂಬ್ಯುಲೆನ್ಸ್ ಗಳನ್ನು ಕ್ಷೇತ್ರದ ಜನತೆಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಬಿಟ್ಟಿದ್ದು ಇದುವರೆಗೂ 5300 ಕ್ಕೂ ಹೆಚ್ಚು ಜನರಿಗೆ ಸೇವೆ ನೀಡಿದೆ. ಪ್ರತಿ ತಿಂಗಳು ಸುಮಾರು 15 ಲಕ್ಷ ಖರ್ಚಾಗುತ್ತಿದೆ. ಆದರೆ ಸೇವೆ ಪಡೆದವರು ನನ್ನನ್ನು ಸಾಥಕ ಬಾವದಿಂದ ನೋಡಿದಾಗ ಸಿಗುವ ಸಂತೋಷ ಬೇರೆ ಕಡೆ ಸಿಗದು ಎಂದರು.ಈ ವೇಳೆ ವಿಭಾಗ ಮುಖ್ಯಸ್ಥರಾದ ಡಾ.ಸಿ.ಎಸ್.ನಾಗಲಕ್ಷ್ಮಿ, ಡಾ.ಜ್ಯೋತಿ, ಡಾ.ಮಂಜುಳ, ವಿದ್ಯಾರ್ಥಿಗಳು ಇದ್ದರು.