ನಮ್ಮ ಜೀವನ ಪರಿಪೂರ್ಣ ಆಗಲು ದೇವರ ನಾಮಸ್ಮರಣೆ ಮಾಡಿ ವಿಶ್ವಾಸದಿಂದ ಉತ್ತಮ ಕಾರ್ಯ ಮಾಡಬೇಕು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಪ್ರತಿನಿತ್ಯ ದೇವಪೂಜೆ, ಸಂಧ್ಯಾವಂದನೆ ಹಾಗೂ ಆಚಾರ ವಿಚಾರ ಸರಿಯಾಗಿ ಪಾಲನೆ ಮಾಡಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಲ್ಲಿದ್ದು, ಸಮಾಜದ ಗೌರವ ಸ್ಥಾನಮಾನ ಅಳವಡಿಸಿಕೊಂಡು ಆಚರಣೆ ಮಾಡುವ ಮೂಲಕ ಮುಂದಿನ ಮಕ್ಕಳಿಗೆ ಆಚರಣೆ ಮಾಡುವಂತ ಯೋಗದಾನದ ಕೆಲಸ ಈ ಕಲಿಯುಗದಲ್ಲಿ ಆಗಬೇಕು. ಇದರಿಂದ ಜೀವನ ಸಾರ್ಥಕತೆ ಆಗುವುದು ಎಂದು ಶ್ರೀ ಕ್ಷೇತ್ರ ಕರ್ಕಿಯ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತ ಸ್ವಾಮಿಗಳು ನುಡಿದರು.ಪಟ್ಟಣದ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯದಲ್ಲಿ ಜರುಗಿದ ದೈವಜ್ಞ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಒಳ್ಳೆಯ ಕೆಲಸದಿಂದ ಮಾತ್ರ ಒಳ್ಳೆಯದಾಗಲು ಸಾಧ್ಯ. ನಮ್ಮ ಜೀವನ ಪರಿಪೂರ್ಣ ಆಗಲು ದೇವರ ನಾಮಸ್ಮರಣೆ ಮಾಡಿ ವಿಶ್ವಾಸದಿಂದ ಉತ್ತಮ ಕಾರ್ಯ ಮಾಡಬೇಕು. ಈ ರೀತಿಯಿಂದ ಜೀವನ ಸಾಗಿದರೆ ದೈವತ್ವ ಅರಿವಾಗುತ್ತದೆ ಎಂದರು.
ಸ್ಥಳೀಯ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಾಂತರಾಮ ವಿ. ಶೇಟ್ ದಂಪತಿ ಪಾದುಕಾ ಪೂಜೆ ನೆರವೇರಿಸಿ ಸಮಾಜದಿಂದ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು. ಕರ್ಕಿ ಮಠದ ವೇ. ಯೋಗೀಶ್ ಭಟ್ ಪ್ರಸ್ತಾವಿಕ ಮಾತನಾಡಿ ದೈವಜ್ಞ ದರ್ಶನ ಕಾರ್ಯಕ್ರಮದ ಕುರಿತು ವಿವರಿಸಿದರು.ದೈವಜ್ಞ ಸರಾಫ ಸಂಘದ ಅಧ್ಯಕ್ಷ ದಿವಾಕರ್ ಕೆ. ರೇವಣಕರ್, ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷ ವಿಜಯ ರಾಮದಾಸ್ ರಾಯ್ಕರ್, ಶ್ರೀ ಲಕ್ಷ್ಮೀನಾರಾಯಣ ಸುವರ್ಣ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಗುರುನಾಥ ಪಿ. ವೇರಣೆಕರ, ದೈವಜ್ಞ ಯುವಕ ಸಂಘದ ಅಧ್ಯಕ್ಷ ದರ್ಶನ್ ಡಿ. ರೇವಣಕರ್ ಉಪಸ್ಥಿತರಿದ್ದರು. ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳಿಯ ಸುಮಿತ್ರಾ ಜಿ.ಶೇಟ್ ಸಂಗಡಿಗರು ಪ್ರಾರ್ಥನ ಗೀತೆ ಹಾಡಿದರು. ಸಮಾಜದ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ. ರಾಯ್ಕರ್ ಸ್ವಾಗತಿಸಿದರು. ಮಹೇಶ್ ವಿ.ಶೇಟ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ ಜಿ.ಶೇಟ್ ಆಭಾರ ಮನ್ನಿಸಿದರು.