ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ರೈತ ಸಂಘ ಒತ್ತಾಯ
ಕನ್ನಡಪ್ರಭ ವಾರ್ತೆ ಕೊರಟಗೆರೆ
ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ರಂಗಹನುಮಯ್ಯ ಸರ್ಕಾರವನ್ನು ಒತ್ತಾಯಿಸಿದರು. ಪಟ್ಟಣದ ಕೆ.ಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿ ವರೆಗೆ ಎತ್ತಿನಗಾಡಿ ಮೂಲಕ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ಮೆರವಣಿಗೆ ಮಾಡಿ ಸಂಘದ ರಾಜ್ಯಾಧ್ಯಕ್ಷ ಕೆ.ಎನ್ ಪುಟ್ಟಣ್ಣಯ್ಯ ಮತ್ತು ದೇಶದ ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ರ ಜನ್ಮ ದಿನಾಚರಣೆ ಅಂಗವಾಗಿ ನಡೆದ ರೈತರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಸುಭದ್ರ ದೇಶವಾಗಿರಲು ಆಹಾರ ಭದ್ರತೆ ಬೇಕು. ಈ ಹಿನ್ನೆಲೆಯಲ್ಲಿ ರೈತರ ರಕ್ಷಣೆಗೆ ಅತ್ಯಾವಶ್ಯಕವಾಗಿದೆ. ನಮ್ಮ ದೇಶದ ಜಿಡಿಪಿಯು ಮೌಲ್ಯ ಹೆಚ್ಚುವುದು ರೈತರು ಬಲದಿಂದ ಆದ್ದರಿಂದ ಸರ್ಕಾರಗಳು ನಮ್ಮ ರಕ್ಷಣೆಗೆ ಬರಬೇಕು ರೈತ ಸಂಕಷ್ಟಕ್ಕೆ ಸಿಲುಕಿದರೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ನರಸಿಂಹಮೂರ್ತಿ ಪದಾಧಿಕಾರಿಗಳಾಧ ಮಾರುತಿ ,ಮೂಡ್ಲಪ್ಪ , ನಾಗರಾಜು, ಮುದ್ದಬಸವಯ್ಯ, ಮಂಜುನಾಥ್, ಪೈಲ್ವಾನ್ ಸಿದ್ದರಾಜು ಸೇರಿದಂತೆ ತಾಲೂಕಿನ ಕೋಳಾಲ, ಹೊಳವನಹಳ್ಳಿ, ಕಸಬಾ ಮತ್ತು ಸಿ.ಎನ್ ದುರ್ಗ ಹೋಬಳಿಯ ಸಂಘದ ಪದಾಧಿಕಾರಿಗಳು ಮತ್ತು ಮುಖಂಡರು ಇದ್ದರು.