ಕನ್ನಡಪ್ರಭ ವಾರ್ತೆ ಹಾಸನ
ನಗರದ ಹೊರವಲಯ ಹನುಮಂತಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಮಂತ್ ಸಿಂಗ್ ಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವ ಎಲೆಕ್ಟ್ರಿಷಿಯನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.ಮೃತ ಯುವಕನ ಸಾವಿನ ಕುರಿತು ಕುಟುಂಬಸ್ಥರು ಗಂಭೀರ ಅನುಮಾನ ವ್ಯಕ್ತಪಡಿಸಿ, ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಹನುಮಂತಪುರ ನಿವಾಸಿ ಪುನೀತ್ (26) ಮೃತ ಯುವಕ. ಅವರು ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಬುಧವಾರ ಎಂದಿನಂತೆ ಸಮವಸ್ತ್ರ ಧರಿಸಿ ಕೆಲಸಕ್ಕೆ ತೆರಳಿದ್ದ ಪುನೀತ್, ಮಧ್ಯಾಹ್ನ ವೇಳೆಗೆ ಕಾರ್ಖಾನೆಯ ನೀರಿನ ತೊಟ್ಟಿಯಲ್ಲಿ ನಿಂತಿರುವ ಸ್ಥಿತಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದೆ. ಮೃತದೇಹವನ್ನು ಹಾಸನದ ಜಿಲ್ಲಾಸ್ಪತ್ರೆ ಶವಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಆವರಣದಲ್ಲಿ ಮೃತನ ಕುಟುಂಬಸ್ಥರು, ಬಂಧುಗಳು ಹಾಗೂ ಸ್ನೇಹಿತರು ಸೇರಿ ನೂರಾರು ಮಂದಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್ಪಿ ಗಂಗಾಧರಪ್ಪ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಯಿತು.ಕುಟುಂಬಸ್ಥರ ಗಂಭೀರ ಆರೋಪಬೆಳಗ್ಗೆ ಸಮವಸ್ತ್ರದಲ್ಲೇ ಕೆಲಸಕ್ಕೆ ಹೋದ ಪುನೀತ್ ಮೃತದೇಹ ಪತ್ತೆಯಾದಾಗ ಬೇರೆ ಬಟ್ಟೆಯಲ್ಲಿ ಇದ್ದನು. ಮಧ್ಯಾಹ್ನ ೧೨ ಗಂಟೆ ವೇಳೆಯಲ್ಲೇ ಸಾವು ಸಂಭವಿಸಿದ್ದರೂ ಸಂಜೆ ೭ ಗಂಟೆಯವರೆಗೆ ನಮಗೆ ಮಾಹಿತಿ ನೀಡಲಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ. ಇದು ಸಹಜ ಸಾವು ಅಲ್ಲ, ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದರು. ಮೃತದೇಹದ ಸ್ಥಿತಿಗತಿಗಳು, ಮಾಹಿತಿ ನೀಡುವಲ್ಲಿ ತಡವಾಗಿರುವುದು ಹಾಗೂ ಘಟನೆ ಕುರಿತು ಸ್ಪಷ್ಟ ಮಾಹಿತಿ ನೀಡದಿರುವುದು ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ. ಸಂಪೂರ್ಣ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ನಿಜಾಂಶ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.ಕಾರ್ಖಾನೆ ನಿರ್ವಹಣೆಯ ವಿರುದ್ಧ ಆಕ್ರೋಶ:ಕಾರ್ಖಾನೆಯಲ್ಲಿ ನೌಕರ ಮೃತಪಟ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ನಿರ್ವಹಣಾ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಾರ್ಖಾನೆ ಪ್ರತಿನಿಧಿಗಳು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು. ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು. ಕಾರ್ಖಾನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇಂತಹ ಘಟನೆಗಳು ಹಿಂದೆಯೂ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆದರೆ ಅವು ಬಹಿರಂಗವಾಗಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ಪುನೀತ್ ಸ್ಥಳೀಯನಾಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲವಾದರೆ ಇದನ್ನೂ ಮುಚ್ಚಿಹಾಕಲಾಗುತ್ತಿತ್ತು ಎಂದು ಕೆಲವರು ಆರೋಪಿಸಿದರು.ಭಕ್ತಿಯಿಂದ ಮರಳಿದ ಯುವಕನ ದುರಂತ ಅಂತ್ಯ:ಕಳೆದ ವಾರ ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಫೆಬ್ರವರಿ ೧೫ರಂದು ಗ್ರಾಮಕ್ಕೆ ಮರಳಿದ್ದ ಪುನೀತ್, ಬುಧವಾರ ಎಂದಿನಂತೆ ಕೆಲಸಕ್ಕೆ ತೆರಳಿದ್ದನು. ಕೆಲವೇ ದಿನಗಳಲ್ಲಿ ಈ ದುರಂತ ಸಂಭವಿಸಿರುವ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಬಹಿರಂಗವಾಗಲಿದೆ ಎಂದು ತಿಳಿಸಿದ್ದಾರೆ.