ಹಿರಿಯ ನಾಗರಿಕರ ದಿನ । ಸಾಧನೆ ಮಾಡಿದ ಹಿರಿಯರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಚಾಮರಾಜನಗರಭಾರತದಲ್ಲಿ ಹಿರಿಯರನ್ನು ಗೌರವಿಸುವ ಪರಿಪಾಠವಿದ್ದು, ಹಿರಿಯ ನಾಗರಿಕರನ್ನು ಪ್ರತಿಯೊಬ್ಬರೂ ಗೌರವಿಸಿ ಅವರಿಗೆ ನೆಮ್ಮದಿ ಜೀವನ ಕಟ್ಟಿಕೊಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕ್ಷೇತ್ರದಲ್ಲಿ ಭಾಗಿಯಾಗಿರುವ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹಿರಿಯ ನಾಗರಿಕರಿಗೆ ಗೌರವ ನೀಡುವ ಸಲುವಾಗಿ ವಿಶ್ವ ಹಿರಿಯ ನಾಗರಿಕರ ದಿನ ಆಚರಿಸಲಾಗುತ್ತದೆ. ಹಿರಿಯ ನಾಗರಿಕರು ನಮ್ಮ ಸಂಸ್ಕೃತಿಯ ಪಳೆಯುಳಿಕೆಯಾಗಿದ್ದು, ಅವರಿಂದ ನಾವು ಕಲಿಯಬೇಕಾದ್ದು, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿರುವುದು ಬಹಳಷ್ಟು ಅಂಶಗಳಿವೆ. ಹಿರಿಯರ ಅನುಭವ ನಮಗೆ ದಾರಿದೀಪವಾಗಿದೆ. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸುವ ತಂದೆ-ತಾಯಿ, ಪೋಷಕರ ತ್ಯಾಗವನ್ನು ಅರಿತು ನಾವೆಲ್ಲರು ಮುನ್ಡೆಯಬೇಕು ಎಂದು ಹೇಳಿದರು.
ಹಿರಿಯ ನಾಗರಿಕರಿಗೆ ಸಾಕಷ್ಟು ಸಮಸ್ಯೆಗಳಿವೆ. ಜೀವನ ಭದ್ರತೆಯ ಗೊಂದಲಗಳಿವೆ. ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ವೃದ್ಧರನ್ನು ಗೌರವಿಸಿ ಆಧರಿಸಬೇಕು. ಹಿರಿಯ ನಾಗರಿಕರ ಸಮಸ್ಯೆಗಳನ್ನು ಮನಗಂಡಿರುವ ಸರ್ಕಾರ ಅವರ ಶ್ರೇಯೋಭಿವೃದ್ಧಿಗಾಗಿ ಪಿಂಚಣಿ, ವೃದ್ಧಾಪ್ಯ ವೇತನ, ಮಾಸಾಶನ ಸೇರಿದಂತೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಹಿರಿಯರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ಹಿರಿಯರ ಮಾರ್ಗದರ್ಶನದಡಿ ಎಲ್ಲರೂ ನಡೆಯಬೇಕು. ಹಿರಿಯ ನಾಗರಿಕರ ಸೇವಾ ಮನೋಭಾವ ಜಾಗೃತಿಯನ್ನು ಮಕ್ಕಳಲ್ಲಿ ಮೂಡಿಸಬೇಕಾಗಿದೆ. ಹಿರಿಯರ ಉತ್ತಮ ವಿಚಾರಧಾರೆಗಳನ್ನು ಮಕ್ಕಳಲ್ಲಿ ತುಂಬಬೇಕು. ಅವಿಭಕ್ತ ಕುಟುಂಬಗಳು ನಮ್ಮಲ್ಲಿ ಕೆಲವೆಡೆ ಇನ್ನೂ ಜೀವಂತವಾಗಿರುವುದಕ್ಕೆ ಹಿರಿಯರ ಮಾರ್ಗದರ್ಶನವೇ ಸಾಕ್ಷಿಯಾಗಿದೆ. ಸಾಮಾಜಿಕ ಪ್ರಜ್ಞೆ ಅರಿವಿಗಾಗಿ ಹಿರಿಯ ನಾಗರಿಕರ ಅನುಭವ ನಮಗೆ ಮುಖ್ಯವಾಗಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ವೃದ್ಧರು ಮಕ್ಕಳಷ್ಟೇ ಮುಗ್ದರು. ಹೆಚ್ಚು ಶಿಕ್ಷಣ ಪಡೆದವರು, ಉನ್ನತ ಹುದ್ದೆಗಳಲ್ಲಿರುವರು ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳದೇ ವೃದ್ದಾಶ್ರಮಕ್ಕೆ ದೂಡುತ್ತಿರುವುದು ಇಂದು ಸರ್ವೇಸಾಮಾನ್ಯ ಸಂಗತಿಯಾಗಿದೆ. ಇದು ಸಾಮಾಜಿಕ ಅಸಮತೋಲನಕ್ಕೂ ಕಾರಣವಾಗಲಿದೆ. ಹಿರಿಯರ ಸಂಸ್ಕಾರ ಸದಾಕಾಲಕ್ಕೂ ಪ್ರತಿಯೊಬ್ಬರಿಗೂ ಬೇಕಾಗಿದೆ ಎಂದು ತಿಳಿಸಿದರು.ಇದೇ ವೇಳೆ ಹಿರಿಯ ನಾಗರಿಕರ ಕಲ್ಯಾಣ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ಜೀವಗಳನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಅಲ್ಲದೆ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧೆಗಳ ವಿಜೇತರನ್ನು ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ, ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಕಲಚೇತನರ ಕಲ್ಯಾಣಧಿಕಾರಿ ಸಕಲೇಶ್ವರ, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಹಾಜರಿದ್ದರು.