ಕನ್ನಡಪ್ರಭ ವಾರ್ತೆ, ಬೆಂಗಳೂರು
ಈ ಸಂಬಂಧ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಎಲ್ಲರಿಗೂ ಮಂತ್ರಿ ಆಗಬೇಕು ಅಂತ ಆಸೆ ಇರುತ್ತೆ ಅಲ್ವ. ನರೇಂದ್ರ ಮೋದಿ ಅವರು ಶಾಸಕರೇ ಆಗಲಿಲ್ಲ, ನೇರ ಸಿಎಂ ಆಗೋದ್ರಪ್ಪ. ಶಾಸಕರೇ ಆಗದೆ ಕೆಲವರು ಮಂತ್ರಿ ಆದ ಉದಾಹರಣೆಗಳಿವೆ. ಹಾಗಾಗಿ ಮೊದಲ ಬಾರಿಗೆ ಶಾಸಕರಾದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ? ನಾನು ಮೊದಲ ಬಾರಿ ಶಾಸಕನಾದಾಗಲೇ ಮಂತ್ರಿ ಆದವನು. ಮಂತ್ರಿ ಆಗಿ 36 ವರ್ಷ ಆಯ್ತು. ನಾವೇ ಇಲ್ಲಿ ಗೂಟ ಹೊಡೆದುಕೊಂಡು ಕುಳಿತುಕೊಳ್ಳಲು ಆಗುತ್ತಾ? ಹೊಸ ಪೀಳಿಗೆ ಬೆಳೆಯಬೇಕಲ್ವಾ? ಹೊಸಬರನ್ನು ತಯಾರು ಮಾಡಬೇಕಲ್ವಾ? ಹಾಗಾಗಿ ಹೊಸ ಶಾಸಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರುವುದರಲ್ಲಿ ತಪ್ಪೇನಿಲ್ಲ. ಅದನ್ನು ಪಕ್ಷದ ನಾಯಕತ್ವ ತೀರ್ಮಾನ ಮಾಡುತ್ತದೆ ಎಂದರು.
ಸಚಿವರಾಗಬಾರದು ಅಂತ ಕಾನೂನಿಲ್ಲ- ಪರಂ:ಮತ್ತೊಂದೆಡೆ ಗೃಹ ಸಚಿವ ಪರಮೇಶ್ವರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹೊಸ ಶಾಸಕರ ಬೇಡಿಕೆ ಸರಿಯಾಗಿದೆ. ಮೊದಲ ಬಾರಿಗೆ ಗೆದ್ದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಅಂತ ಕಾನೂನೇನೂ ಇಲ್ಲ. ಆದರೆ, ಒಂದಷ್ಟು ಅನುಭವ ಆಗಲಿ ಎನ್ನುವ ಕಾರಣಕ್ಕೆ ತೆಗೆದುಕೊಳ್ಳುವುದಿಲ್ಲ ಅಷ್ಟೆ. ನಾನು 1989 ರಲ್ಲಿ ಪ್ರಥಮ ಬಾರಿಗೆ ಶಾಸಕನಾದೆ. ಆದರೆ 1993ರಲ್ಲಿ ಸಚಿವನನ್ನಾಗಿ ಮಾಡಿದರು. ಅವಕಾಶ ಬೇಡ ಅಂತ ಯಾರೂ ಹೇಳಲ್ಲ. ಸಂಪುಟದಲ್ಲಿ ಕೆಲವರಾದರೂ ಹೊಸ ಮುಖ ಇರಬೇಕು ಅಂತ ಕೆಲವು ಸಲ ಲೆಕ್ಕಾಚಾರಗಳು ನಡೆಯುತ್ತವೆ. ಆದರೆ, ಅದು ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ. ಅವರನ್ನು ಮನವೊಲಿಕೆ ಮಾಡಬೇಕಾಗುತ್ತದೆ ಎಂದರು.
ಹೊಸದಾಗಿ ಶಾಸಕರಾದವರಿಗೂ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಕೋರಿ 31 ಶಾಸಕರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿರುವುದು ನ್ಯಾಯ ಸಮ್ಮತವಾಗಿದೆ. ಅವರ ಬೇಡಿಕೆ ಸಂಬಂಧ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡಲಿ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಬ್ಯಾಟ್ ಬೀಸಿದ್ದಾರೆ.
ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬಂದರೂ ಸಂಪುಟದಲ್ಲಿ ಇದ್ದವರ ಹೆಸರುಗಳೇ ಇರುತ್ತವೆ. ಸಚಿವರಾಗಿದ್ದವರಿಗೇ ಮತ್ತೆ ಮತ್ತೆ ಅವಕಾಶ ಕೊಟ್ಟರೆ ಹೊಸಬರು ಸಚಿವರು ಆಗೋದು ಯಾವಾಗ? ಶೇ.50 ಸ್ಥಾನ ಹಿರಿಯರಿಗೆ ನೀಡಿ, ಉಳಿದ ಸ್ಥಾನಗಳನ್ನು ಕಿರಿಯರು, ಮೊದಲು, ಎರಡನೇ ಬಾರಿ ಶಾಸಕರಾದವರಿಗೂ ನೀಡಲಿ, ತಪ್ಪೇನು? ಪಕ್ಷದ ಹಿತದೃಷ್ಟಿಯಿಂದ ಹಳೆ ಬೇರು ಹೊಸ ಚಿಗುರು ಇದ್ದರೆ ಸರ್ಕಾರವೆಂಬ ಮರ ನೋಡುವುದಕ್ಕೂ ಚೆನ್ನಾಗಿರುತ್ತದೆ. ಪತ್ರ ಬರೆದಿರುವ 31 ಶಾಸಕರೂ ಸಚಿವ ಸ್ಥಾನ ಕೇಳಿಲ್ಲ. ಕನಿಷ್ಠ ಐದು ಜನ ಹೊಸಬರಿಗಾದರೂ ಅವಕಾಶ ಕೊಡಿ ಅಂತ ಹೇಳಿದ್ದಾರೆ. ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಅವರು ಅವರ ಬೇಡಿಕೆ ಬಗ್ಗೆ ತೀರ್ಮಾನಿಸಲಿ ಎಂದರು.ಬಂಡಾಯ ಅಲ್ಲ- ಪಟ್ಟಣ:
ವಿಧಾನಸೌಧದಲ್ಲಿ ಮಾತನಾಡಿದ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಮೊದಲ ಬಾರಿ ಗೆದ್ದಿರುವ ಶಾಸಕರು ಮಂತ್ರಿ ಸ್ಥಾನ ಕೇಳುವುದು ತಪ್ಪಲ್ಲ. ಇದು ಯಾವುದೇ ಗೊಂದಲ, ಬಂಡಾಯ ಅಂತಲೂ ಅಲ್ಲ ಎಂದು ಹೇಳಿದರು.ನಮ್ಮ ಪಕ್ಷದಲ್ಲಿ ಮೊದಲಿನಿಂದಲೂ ಹಿರಿಯರಿಗೆ ಸಂಪುಟದಲ್ಲಿ ಸ್ಥಾನ ಕೊಡುವುದು ಪದ್ದತಿ. ಕೆಲವು ಸಲ ಹೊಸಬರನ್ನು ಸಂಪುಟಕ್ಕೆ ತೆಗೆದುಕೊಂಡ
ಉದಾಹರಣೆಗಳೂ ಇವೆ. ಹಾಗಾಗಿ ಹೊಸಬರು ಕೆಲವು ಸ್ಥಾನ ಕೇಳಿರುವುದು ತಪ್ಪೇನಲ್ಲ. ಈ ಬಗ್ಗೆ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಅವರು ನಿರ್ಧಾರ ಮಾಡುತ್ತಾರೆ ಎಂದರು.-----
ಕೋಟ್ಪಕ್ಷದ ವೇದಿಕೆಯಲ್ಲಿ ಚರ್ಚೆ
ಕರ್ನಾಟಕದ ಹಲವು ಹೊಸ ಶಾಸಕರು ಸಚಿವ ಸ್ಥಾನಕ್ಕಾಗಿ ಪತ್ರ ಬರೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾತಂತ್ರ ಇದೆ. ಬಿಜೆಪಿ ಶಾಸಕರು ಈ ರೀತಿ ಪತ್ರ ಬರೆದಿದ್ದರೇ ಇಷ್ಟೊತ್ತಿಗೆ ದೇಶದ್ರೋಹದ ಆರೋಪದ ಮೇಲೆ ಎಫ್‌ಐಆರ್ ಹಾಕಲಾಗುತ್ತಿತ್ತು. ಕಾಂಗ್ರೆಸ್ ಎಲ್ಲರ ಮಾತು ಕೇಳುತ್ತದೆ. ನಮ್ಮ ಶಾಸಕರು ಅವರ ಮನಸ್ಸಿನಲ್ಲಿ ಏನಿದೆ ಎನ್ನುವುದು ಪತ್ರದಲ್ಲಿ ತಿಳಿಸಿದ್ದಾರೆ. ಪಕ್ಷದ ವೇದಿಕೆಯಲ್ಲೇ ಪತ್ರ ಕೊಟ್ಟಿದ್ದಾರೆ. ನಾವು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ, ಪರಿಹಾರ ಮಾಡುತ್ತೇವೆ.-ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯ ಕಾಂಗ್ರೆಸ್ ಉಸ್ತುವಾರಿ.ಕೂಲಿ ಕೊಡೋದಾದರೆ ಮೊದಲು ಪರಮೇಶ್ವರ್‌ಗೆ ನೀಡಿ:
‘ಮುಖ್ಯಮಂತ್ರಿ ಹುದ್ದೆಯಲ್ಲಿ ಸಿದ್ದರಾಮಯ್ಯ ಅವರು ಮುಂದುವರೆಯಬೇಕು ಎಂಬುದು ನನ್ನ ವೈಯಕ್ತಿಕ ಅಭಿಲಾಷೆ. ಒಂದು ವೇಳೆ ಬದಲಾದರೆ ದಲಿತರಿಗೆ ಅವಕಾಶ ನೀಡಬೇಕು. ಡಿ.ಕೆ.ಶಿವಕುಮಾರ್ ಅವರಿಗಿಂತ ಮೊದಲು ಎರಡು ಬಾರಿ ಅಧ್ಯಕ್ಷರಾಗಿದ್ದ ಡಾ। ಜಿ.ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಬೇಕು’ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಈಗಲೂ ನನ್ನ ನಿರ್ಧಾರ ಅಚಲ. ಸಿದ್ದರಾಮಯ್ಯ ಅವರು ಮುಂದುವರೆಯಬೇಕು ಎಂಬುದು ವೈಯಕ್ತಿಕ ಅಭಿಲಾಷೆ. ಅವರು ಬದಲಾದರೆ ದಲಿತರಿಗೆ ಅವಕಾಶ ನೀಡಬೇಕು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಬಂದರೆ ಬಹಳ ಸಂತೋಷ. ಅವರಿಗೆ ದೆಹಲಿಯಲ್ಲಿ ಹೆಚ್ಚು ಜವಾಬ್ದಾರಿ ಇದ್ದರೆ ಪರಮೇಶ್ವರ್ ಅವರಿಗೆ ಅವಕಾಶ ಕೊಡಲಿ ಎಂದು ಆಗ್ರಹಿಸಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಲಿ ಕೇಳುತ್ತೇವೆ ಎನ್ನುತ್ತಿದ್ದರು. ಆದರೆ, ಪರಮೇಶ್ವರ್ ಅವರು ಎರಡು ಬಾರಿ ಅಧ್ಯಕ್ಷರಾಗಿದ್ದವರು. ಮೊದಲು ಅವರ ಕೂಲಿ ಕೊಡಲಿ. ಹಳೆಯ ಕೂಲಿ ಕೊಟ್ಟು ಹೊಸ ಕೂಲಿ ಬಗ್ಗೆ ತೀರ್ಮಾನ ಮಾಡಲಿ ಎಂದು ರಾಜಣ್ಣ ಹೇಳಿದರು.ಬದಲಾವಣೆ ಸಮಯದಲ್ಲಿ ನಮ್ಮ ಅಭಿಪ್ರಾಯ ಕೇಳುತ್ತಾರೋ ಇಲ್ಲವೋ ಗೊತ್ತಿಲ್ಲ. ಎಲ್ಲರನ್ನೂ ಕೇಳಿ ಮಾಡಿದರೆ ಪಕ್ಷ ಸಂಘಟನೆ ಉತ್ತಮವಾಗಿರುತ್ತದೆ. ಕೆಪಿಸಿಸಿ ನಾಯಕತ್ವ, ಸರ್ಕಾರದ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ನಾಯಕತ್ವ ವಿಚಾರದಲ್ಲಿ ಬದಲಾವಣೆ ಇಲ್ಲ ಎಂದಾದರೂ ಹೇಳಬೇಕು. ಇದು ನಿಂತ ನೀರಾಗಿದೆ, ನೀರು ಒಂದೇ ಸಮನೆ ನಿಂತರೆ ಉಪಯೋಗಕ್ಕೆ ಬರುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ರಾಜಕಾರಣ ಈ ಪರಿಸ್ಥಿತಿಗೆ ಬಂದು ನಿಂತಿದೆ ಎಂದು ಎಐಸಿಸಿಯ ವಿಳಂಬ ಧೋರಣೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.---ಜಾರಕಿಹೊಳಿ ಸಿದ್ದು ಮಟ್ಟಕ್ಕೆ ಅಲ್ಲದಿದ್ದರೂ ನಾಯಕತ್ವ ಬೆಳೆಸಿಕೊಳ್ತಾರೆ: ಸಿದ್ದರಾಮಯ್ಯ ಅವರ ಬಳಿಕ ಅಹಿಂದ ನಾಯಕತ್ವದ ಭವಿಷ್ಯದ ಬಗ್ಗೆ ಯಾರಿಗೂ ಪ್ರಶ್ನೆ ಎದುರಾಗಬಾರದು. ಹೀಗಾಗಿ ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ಕೊಟ್ಟರೆ ಸಿದ್ದರಾಮಯ್ಯನವರ ಮಟ್ಟಕ್ಕೆ ಅಲ್ಲದಿದ್ದರೂ ಎಲ್ಲರನ್ನು ಪ್ರತಿನಿಧಿಸುವ ನಾಯಕತ್ವ ಬೆಳೆಸಿಕೊಳ್ಳಲಿದ್ದಾರೆ ಎಂದು ಕೆ.ಎನ್. ರಾಜಣ್ಣ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಮಟ್ಟಕ್ಕೆ ಇನ್ನು ಯಾರೂ ಇಲ್ಲ. ಸಿದ್ದರಾಮಯ್ಯ ಏಳು ಬೀಳು ನೋಡಿ ಪರಿಪಕ್ವ ನಾಯಕರಾಗಿದ್ದಾರೆ. ಸತೀಶ್ ಜಾರಕಿಹೊಳಿಗೆ ಅವಕಾಶ ಕೊಟ್ಟರೆ ಸಿದ್ದರಾಮಯ್ಯನವರ ಮಟ್ಟಕ್ಕೆ ಅಲ್ಲದೇ ಇದ್ದರೂ ಎಲ್ಲರನ್ನು ಪ್ರತಿನಿಧಿಸುವ ನಾಯಕತ್ವವನ್ನು ಬೆಳೆಸಿಕೊಳ್ಳುತ್ತಾರೆ ಎಂದರು.