ಕನ್ನಡಪ್ರಭ ವಾರ್ತೆ ರಾಮನಗರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಪುರಸಭೆಯಲ್ಲಿ ಆಡಳಿತಾರೂಢ ಜೆಡಿಎಸ್ ಪಕ್ಷ ತೆರಿಗೆ ಸಂಗ್ರಹ, ಪಟ್ಟಣದ ಅಭಿವೃದ್ಧಿ ಹಾಗೂ ಜನರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇವರ ಅಸಮರ್ಥ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಪಕ್ಷ ಸಿಕ್ಕಿರುವ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಜೊತೆಗೆ ಜನರಿಗೆ ಸೇವೆ ಸಲ್ಲಿಸುವ ಕೆಲಸ ಮಾಡುತ್ತಿಲ್ಲ. ಬದಲಿಗೆ ಅಧ್ಯಕ್ಷರ ಬದಲಾವಣೆಯಲ್ಲಿಯೇ ಕಾಲ ಹರಣ ಮಾಡುತ್ತಿದೆ. ಹಾಗಾಗಿ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಬಿಡದಿ ಸೊಸೈಟಿ ಮಾದರಿಯಲ್ಲಿಯೇ ಪುರಸಭೆಯ ಎಲ್ಲ ಜೆಡಿಎಸ್ ಸದಸ್ಯರು ರಾಜೀನಾಮೆ ನೀಡಿ ಉಪಕಾರ ಮಾಡಲಿ ಎಂದರು.₹15 - ₹20 ಕೋಟಿ ತೆರಿಗೆ ವಸೂಲಿ ಬಾಕಿ:
ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದಲೇ ಬಿಡದಿ ಪುರಸಭೆಗೆ ಎರಡು ವರ್ಷಗಳ ತೆರಿಗೆ ಹಣ ಸುಮಾರು ₹6 - ₹7 ಕೋಟಿ ಬಾಕಿ ಇದೆ. ಈ ಹಣ ತರಲು ಮೂವರು ಜೆಡಿಎಸ್ ಅಧ್ಯಕ್ಷರ ಪೈಕಿ ಯಾರ್ಯಾರು ಎಷ್ಟು ಬಾರಿ ಕೆಐಎಡಿಬಿ ಕಚೇರಿಗೆ ಹೋಗಿ ಚರ್ಚೆ ನಡೆಸಿದ್ದಾರೆಂದು ಹೇಳಲಿ.
ಇನ್ನು ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚುವರಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಕಾರ್ಖಾನೆಗಳು ತೆರಿಗೆ ವಂಚಿಸುತ್ತಿವೆ. ಬಸವೇಶ್ವರ ಶಾಲೆಯ ₹3 ಕೋಟಿ ತೆರಿಗೆ ವಿಚಾರವಾಗಿ ಎರಡು ತಿಂಗಳಿಂದ ಸರ್ಕಸ್ ನಡೆಯುತ್ತಿದೆ. ಬಿಡದಿಯಲ್ಲಿ 22 ಸಾವಿರ ಆಸ್ತಿಗಳಿದ್ದು, ಇದರಲ್ಲಿ 10- 11 ಸಾವಿರ ಆಸ್ತಿಗಳು ಬಿ ಖಾತೆ ಆಗುವುದು ಇನ್ನೂ ಬಾಕಿ ಇದೆ. ಫಿಲಂ ಸಿಟಿ ವಿಚಾರದಲ್ಲಿ ಸಾಕಷ್ಟು ಬೋಗಸ್ ನಡೆದಿದ್ದು, ಇಲ್ಲಿವರೆಗೂ ತೆರಿಗೆ ಪಾವತಿಯೇ ಆಗಿಲ್ಲ. ಇದರ ವಸೂಲಿ ಬಗ್ಗೆ ಯಾರೂ ಕ್ರಮ ವಹಿಸಿಲ್ಲ ಎಂದು ಟೀಕಿಸಿದರು.
ಸಚಿವ ಬಾಲಕೃಷ್ಣರವರು ರೇಷ್ಮೆ ಇಲಾಖೆಗೆ ಸೇರಿದ ಜಾಗವನ್ನು ಪುರಸಭೆ ನೂತನ ಕಚೇರಿ ನಿರ್ಮಾಣಕ್ಕೆ ಮಂಜೂರು ಮಾಡಿಸಿದರು. ಅದೇ ಇಲಾಖೆಗೆ ಸೇರಿರುವ 12- 14 ಎಕರೆ ಜಾಗದಲ್ಲಿ ಅಂದಾಜು ₹270 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಸಿದ್ಧತೆಗಳು ನಡೆದಿವೆ. ನಲ್ಲಿಗುಡ್ಡೆ ಕೆರೆಯನ್ನು ₹25 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ.
ಅಧ್ಯಕ್ಷರ ಬದಲಾವಣೆಯೇ ದೊಡ್ಡ ಸಾಧನೆ:
ಸಚಿವ ಬಾಲಕೃಷ್ಣ ಮತ್ತು ಕಾಂಗ್ರೆಸ್ ಸದಸ್ಯರು ಸಹಕಾರ ನೀಡದೆ ಹೋಗಿದ್ದರೆ ಕೋಟ್ಯಂತರ ರುಪಾಯಿಗಳ ಟೆಂಡರ್ ಪ್ರಕ್ರಿಯೆ ಮುಗಿಸಿ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯುತ್ತಿತ್ತು. ಜೆಡಿಎಸ್ ನವರು ಈಗಲೂ ಅದೇ ಶಾಸಕರನ್ನು ಉಪಯೋಗಿಸಿಕೊಂಡು ಏಕೆ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಸಿ.ಉಮೇಶ್ ಪ್ರಶ್ನಿಸಿದರು.
ಬಿಡದಿ ಪುರಸಭೆಯ ಹಳೆ ಕಚೇರಿ ಬಗ್ಗೆ ಕೇಳುವವರೆ ಇಲ್ಲ. ಬಿಡದಿ ಮುಖ್ಯ ರಸ್ತೆ ಅಭಿವೃದ್ಧಿಗೆ ₹90 ಲಕ್ಷ ವೆಚ್ಚದಲ್ಲಿ ಟೆಂಡರ್ ಕರೆದು ವರ್ಕ್ ಆರ್ಡರ್ ಕೊಡಲಾಗಿದೆ. ಇಲ್ಲಿವರೆಗೂ ಏಕೆ ಕಾಮಗಾರಿ ಪ್ರಾರಂಭಿಸಿಲ್ಲ? ವೈಫಲ್ಯಕ್ಕೆ ಯಾರು ಹೊಣೆಗಾರರು? ತೆರಿಗೆ ಹಣ ವಸೂಲಿಯಲ್ಲಿ ಅಸಮರ್ಥವಾಗಿರುವ ಜೆಡಿಎಸ್ ಪಕ್ಷ ಅಧಿಕಾರ ಬಿಟ್ಟು ಕೆಳಗಿಳಿಯಲಿ.
- ಸಿ.ಉಮೇಶ್, ವಿಪಕ್ಷ ನಾಯಕರು, ಬಿಡದಿ ಪುರಸಭೆ.