- ಜಿಲ್ಲಾಮಟ್ಟದ ವಕಾಲತ್ತಿನ ಸಭೆ ಕಾರ್ಯಸೂಚಿ ಉದ್ಘಾಟಿಸಿ ನ್ಯಾ.ಮಹಾವೀರ ಮ. ಕರೆಣ್ಣವರ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಭಾರತದ ಎಲ್ಲ ನಾಗರೀಕರಿಗೆ ಸಂವಿಧಾನದಲ್ಲಿ ಖಾತ್ರಿಪಡಿಸಿದ ಮೂಲಭೂತ ಹಕ್ಕುಗಳು ಮತ್ತು ಮಾನವ ಹಕ್ಕುಗಳು ಲೈಂಗಿಕ ಕಾರ್ಯಕರ್ತೆಯರಿಗೂ ಇವೆ. ಅವುಗಳನ್ನು ಅನುಭವಿಸುವ ಹಕ್ಕು ಅವರಿಗೂ ಇದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಹೇಳಿದರು.ನಗರದ ಅಶೋಕ ಇನ್ ಹೋಟೆಲ್‌ನಲ್ಲಿ ಬುಧವಾರ ಶ್ರೀ ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಕಾಲತ್ತಿನ ಸಭೆ ಕಾರ್ಯಸೂಚಿ ಉದ್ಘಾಟಿಸಿ ಅವರು ಮಾತನಾಡಿದರು. ಲೈಂಗಿಕ ಕಾರ್ಯಕರ್ತರು, ಅಂತಹವರ ಹಕ್ಕುಗಳ ವಿಚಾರದಲ್ಲಿ ಸಂಬಂಧಿಸಿದ ಇಲಾಖೆಗಳು, ಪೊಲೀಸ್ ಇಲಾಖೆ, ಇತರೆ ಕಾನೂನು ಸಂಸ್ಥೆಗಳು ಸಹ ಸಂವೇದನಾಶೀಲವಾಗಿರಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ, ಹಿರಿಯ ವಕೀಲ ಎಲ್.ಎಚ್. ಅರುಣಕುಮಾರ ಮಾತನಾಡಿ, ಸಂವಿಧಾನದ 21ನೇ ವಿಧಿಯಡಿ ಘನತೆಯಿಂದ ಬದುಕುವ ಹಕ್ಕನ್ನು ಎಲ್ಲರಿಗೂ ನೀಡಲಾಗಿದೆ. ಸಮಾಜವು ಲೈಂಗಿಕ ಕಾರ್ಮಿಕರನ್ನು, ಏಡ್ಸ್ ಸೋಂಕು ಪೀಡಿತರನ್ನು, ಮಂಗಳಮುಖಿಯರನ್ನು ಸಹ ಸಂವಿಧಾನದ ಆಶಯದಂತೆ ಸಮಾನತೆಯಿಂದ ಕಾಣಬೇಕು. ಲೈಂಗಿಕ ಕಾರ್ಯಕರ್ತರು, ಮಂಗಳಮುಖಿಯರ ಸಮಸ್ಯೆ ಪರಿಹರಿಸುವ ಹೊಣೆ ಸರ್ಕಾರ, ಸಮುದಾಯಗಳ ಮೇಲಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಂಜುಳಾ, ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಆಪ್ತ ಸಮಾಲೋಚಕರಾದ ಡಾ.ಗುರು ಸವಣೂರು, ಸಂಘಟನೆಯ ಸಮುದಾಯ ಮಹಿಳೆಯರಾದ ಜ್ಯೋತಿ, ರೇಣುಕಾ, ಸಂಘಟನೆಯ ರಾಜಶ್ರೀನಿವಾಸ, ಮುಕ್ತಾ ಪೂಜಾರ್, ವಿಜಯಲಕ್ಷ್ಮೀ, ವಕೀಲರು, ರಾ.ಲ. ಕಾನೂನು ಕಾಲೇಜು ವಿದ್ಯಾರ್ಥಿಗಳು, ಪೊಲೀಸ್ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘಟನೆಯವರು ಭಾಗವಹಿಸಿದ್ದರು. ಸಂಘಟನೆಯ ಉಚ್ಚೆಂಗೆಪ್ಪ ಪ್ರಾರ್ಥಿಸಿದರು.
ಬಾಕ್ಸ್ ತಮ್ಮ ಆರೋಗ್ಯ, ಸುರಕ್ಷತೆಗಾಗಿ ಲೈಂಗಿಕ ಕಾರ್ಯಕರ್ತರು ಬಳಸಿಕೊಳ್ಳುವ ಕ್ರಮಗಳನ್ನು ಅಪರಾಧವೆಂದು ಪರಿಗಣಿಸಬಾರದು. ಎಲ್ಲ ಇಲಾಖೆ, ಸಾರ್ವಜನಿಕರಿಗೆ ಲೈಂಗಿಕ ಕಾರ್ಮಿಕರ ಸಮುದಾಯವು ಎದುರಿಸುತ್ತಿರುವ ಸವಾಲುಗಳ ಬಗ್ಗೆ, ಅಂತಹವರು ಅನುಭವಿಸುತ್ತಿರುವ ಕಿರುಕುಳ, ಹಿಂಸೆಗಳ ಬಗ್ಗೆ ಸಮಾಜಕ್ಕೆ ಮನವರಿಕೆ ಮಾಡಲು ಮತ್ತು ಪರಿಹಾರ ದೊರಕಿಸಲು ಇಲಾಖೆಗಳು ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ
- - - -24ಕೆಡಿವಿಜಿ7: