ಧಾರವಾಡ:
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಮಹಾನಗರ ಪಾಲಿಕೆ ಬೇಡಿಕೆಯು ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಬಿಜೆಪಿ ಮುಖಂಡರ ಕುತಂತ್ರದಿಂದ ವಿಳಂಬವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪಕ್ಷಾತೀತ ಹೋರಾಟಗಾರರ ಜೊತೆ ನಾನೂ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದರು. ಆಗ ಧಾರವಾಡ ಜನರ ಭಾವನೆ ಮತ್ತು ಬೇಡಿಕೆಗಾಗಿ ಹತಾಶಗೊಂಡು ಬಿಜೆಪಿಯವರು ಹೋರಾಟದಲ್ಲಿ ಭಾಗವಹಿಸಿದರು ಎಂದು ಹೋರಾಟದ ಹಾದಿಯನ್ನು ಹೇಳಿದರು.
ಪ್ರತ್ಯೇಕ ಪಾಲಿಕೆಯ ಇಡೀ ಹೋರಾಟದಲ್ಲಿ ಅನವಶ್ಯಕವಾಗಿ ಗೊಂದಲ ಸೃಷ್ಟಿಸಿ ಹೋರಾಟ ಹಾದಿ ತಪ್ಪಿಸಲು ಯತ್ನಿಸಿದ್ದು ಬಿಜೆಪಿ ಮುಖಂಡರು ಎಂಬುದು ಸ್ಪಷ್ಟ. ಈ ಎಲ್ಲ ಬೆಳವಣಿಗೆಗಳಿಂದ ಆಕ್ರೋಶಗೊಂಡ ನಂತರ ಹೋರಾಟಗಾರರು ರಾಜ್ಯಪಾಲರನ್ನು ಭೇಟಿ ಮಾಡಲಾಯಿತು. ಅಲ್ಲದೇ ಅಂದಿನ ಸಚಿವ ಸಂತೋಷ ಲಾಡ್ ಅವರ ನೇತೃತ್ವದಲ್ಲಿಯೂ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರತ್ಯೇಕ ಪಾಲಿಕೆ ಮಸೂದೆ ಅಂಗೀಕಾರಕ್ಕೆ ಮನವಿ ಮಾಡಲಾಯಿತು. ನಮ್ಮ ಮುಖಂಡರ ಮತ್ತು ಹೋರಾಟಗಾರರ ಒತ್ತಡದಿಂದ ರಾಜ್ಯಪಾಲರು ಮಸೂದೆಯನ್ನು ಸರ್ಕಾರಕ್ಕೆ ಕಳುಹಿಸಿದರು ಎಂದು ನಾಗರಾಜ ಗೌರಿ ಸಮರ್ಥನೆ ಮಾಡಿಕೊಂಡರು.ನಂತರ ಮುಖ್ಯಮಂತ್ರಿ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರತ್ಯೇಕ ಪಾಲಿಕೆ ಅಗತ್ಯತೆ ಮನವರಿಕೆ ಮಾಡಿಕೊಡಲಾಯಿತು. ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರದ ಪರವಾಗಿ ಸ್ಪಷ್ಟ ಭರವಸೆ ನೀಡಲಾಯಿತು. ಈ ವಿಷಯದಲ್ಲಿ ಸರ್ಕಾರದ ಮೇಲೆ ನಂಬಿಕೆಯಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ, ಪ್ರತ್ಯೇಕ ಪಾಲಿಕೆಯಲ್ಲಿ ಪಕ್ಷಾತೀತವಾಗಿ ಹೋರಾಟಗಾರರು, ಸಂಘ-ಸಂಸ್ಥೆಗಳು, ಸಾಹಿತಿಗಳು, ಬೇರೆ ಬೇರೆ ಸಮುದಾಯದ ಮುಖಂಡರು ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಲಾಯಿತು ಎಂದರು.